

ಬೆಳಗಾವಿ: ರಾಮದುರ್ಗ ಪಟ್ಟಣದಲ್ಲಿ ಶ್ರೀರಾಮ ಸೇನೆ (Sri Ram Sena) ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದವರ ಆರೋಗ್ಯ ವಿಚಾರಿಸಿದ ಬಳಿಕ ಗಲಭೆಕೋರರಿಗೆ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ (Mahadevappa S Yadawad) ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಮನೆಯಲ್ಲಿರುವ ಮಕ್ಕಳು, ಗೂಂಡಾಗಳಿಗೆ ಬುದ್ಧಿ ಹೇಳಿ. ನೀವು ಬುದ್ಧಿ ಹೇಳದೇ ಇದ್ದರೆ ರಾಮದುರ್ಗದಲ್ಲಿ ಮುಂದೆ ಬೇರೆನೇ ನಡೆಯುತ್ತದೆ ಎಂದು ಹೇಳಿದ್ದಾರೆ.
ಗಲಭೆಗೆ ಕುಮ್ಮಕ್ಕು, ಪ್ರಚೋದನೆ ನೀಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವುದಿಲ್ಲ. ನಾನು ಶಾಸಕನಾದ ಅವಧಿಯಲ್ಲಿ ಒಮ್ಮೆಯೂ ಹಿಂದೂ-ಮುಸ್ಲಿಂ ಗಲಭೆಯಾಗಲು ಅವಕಾಶ ಕೊಟ್ಟಿಲ್ಲ. ರಾಮದುರ್ಗ ಕ್ಷೇತ್ರದಲ್ಲಿ ಈವರೆಗೆ ಹಿಂದೂ-ಮುಸ್ಲಿಂ ಮಧ್ಯೆ ಒಂದೂ ಗಲಭೆ ಆಗಿಲ್ಲ ಎಂದಿದ್ದಾರೆ.
ಈದ್ ಮುಸ್ಲಿಮರ (Muslim Community) ದೊಡ್ಡ ಹಬ್ಬ. ಹಿಂದೂಗಳಿಗೂ ಭೂದೇವಿಗೆ ಚರಗ ಚೆಲ್ಲುವ ಶೀಗಿಹುಣ್ಣಿಮೆ ಹಬ್ಬವಾಗಿದೆ. ಇದೇ ದಿನವೇ ಇಂಥ ಘಟನೆ ನಡೆದಿರುವುದು ಖಂಡನೀಯ. ಕಿಡಿಗೇಡಿಗಳನ್ನು ಹದ್ದುಬಸ್ತಿನಲ್ಲಿಡಲು ಗೃಹಸಚಿವರು, ಮುಖ್ಯಮಂತ್ರಿಗೆ ಮನವರಿಕೆ ಮಾಡುತ್ತೇನೆ. ಆರೋಪಿಗಳ ವಿರುದ್ಧ ಗೂಂಡಾ ಕೇಸ್ ದಾಖಲಿಸಲು ಪೊಲೀಸರಿಗೆ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಶಾಸಕ ಮಹಾದೇವಪ್ಪ ಯಾದವಾಡ ಚಾಕುವಿನಿಂದ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿರುವ ರವಿ ಬಂಡಿವಡ್ಡರ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ರವಿ ಬಂಡಿವಡ್ಡರ ಪೋಷಕರ ಬಳಿ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.