

ಜೈಭೀಮ್ ಮಿಷನ್ ಸಂಘಟನೆ ಏರ್ಪಡಿಸಿದ್ದ ಧಮ್ಮ ಚಕ್ರ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ರವರ ಸಂಬಂಧಿ ರಾಜರತ್ನ ಅಂಬೇಡ್ಕರ್ ಕೂಡ ಭಾಗವಹಿಸಿದ್ದರು
ಡಾ.ಬಿ.ಆರ್ ಅಂಬೇಡ್ಕರ್ರವರು ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನದ ಅಂಗವಾಗಿ ದೆಹಲಿಯಲ್ಲಿ ನಡೆದ ಧಮ್ಮ ಚಕ್ರ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಆಪ್ ಸಚಿವ ಸೇರಿ 7000ಕ್ಕೂ ಹೆಚ್ಚು ಜನರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.
ದೆಹಲಿಯ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜೇಂದ್ರ ಪಾಲ್ ಗೌತಮ್ ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ರವರು ಪ್ರತಿಪಾದಿಸಿದ್ದ 22 ಪ್ರತಿಜ್ಞೆಗಳನ್ನು ತೆಗೆದುಕೊಂಡಿದ್ದಾರೆ.
ಮುಂಬೈನಲ್ಲಿ ಅಕ್ಟೋಬರ್ 5ರಂದು ನಡೆದ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಆಪ್ ಸಚಿವ ಸೇರಿದಂತೆ ಸಾವಿರ ಮಂದಿ ಭಾಗವಹಿಸಿದ್ದು, ನಮಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಲ್ಲಿ ನಂಬಿಕೆ ಇಲ್ಲ. ಅವರನ್ನು ಪೂಜಿಸುವುದಿಲ್ಲ ಎಂದು ಪ್ರತಿಜ್ಞೆ ಕೈಗೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ಕುರಿತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. 22 ಪ್ರತಿಜ್ಞೆಗಳಲ್ಲಿ ಒಂದಾದ ಬ್ರಹ್ಮ, ವಿಷ್ಣು, ಮಹೇಶ್ವರನಲ್ಲಿ ನನಗೆ ನಂಬಿಕೆಯಿಲ್ಲ, ಅವರನ್ನು ನಾನು ಪೂಜಿಸುವುದಿಲ್ಲ ಎಂದು ಕಾರ್ಯಕ್ರಮದಲ್ಲಿ ಬೋದಿಸಿರುವುದಕ್ಕೆ ಹಿಂದೂ ದೇವತೆಗಳಿಗೆ ಅವಮಾನ ಎಂದು ಕರೆದಿದೆ.
ಎಎಪಿ ಸಚಿವರು ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಸಚಿವರನ್ನು ಪಕ್ಷದಿಂದ ತೆಗೆದು ಹಾಕಬೇಕು. ನಾವು ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.
“ಕೇಜ್ರಿವಾಲ್ ಮಂತ್ರಿ ಹಿಂದೂಗಳ ವಿರುದ್ಧ ಹೇಗೆ ವಿಷ ಉಗುಳುತ್ತಿದ್ದಾರೆ ನೋಡಿ. ಚುನಾವಣಾ ಹಿಂದೂ ಕೇಜ್ರಿವಾಲ್ ಮತ್ತು ಎಎಪಿಯ ಹಿಂದೂ ವಿರೋಧಿ ಮುಖ ಎಲ್ಲರ ಮುಂದೆ ಬಂದಿದೆ. ಹಿಂದೂ ವಿರೋಧಿ ಎಎಪಿಗೆ ಸಾರ್ವಜನಿಕರು ಶೀಘ್ರದಲ್ಲೇ ತಕ್ಕ ಉತ್ತರ ನೀಡಲಿದ್ದಾರೆ. ನಾಚಿಕೆ ಆಗುತ್ತಿದೆ ಕೇಜ್ರಿವಾಲ್” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ರಾಜೇಂದ್ರ ಪಾಲ್ ಗೌತಮ್, “ನನಗೆ ಬೌದ್ಧ ಧರ್ಮದಲ್ಲಿ ನಂಬಿಕೆಯಿದೆ. ಭಾರತದ ಸಂವಿಧಾನವು ನನಗಿಷ್ಟವಾದ ಧರ್ಮವನ್ನು ಅನುಸರಿಸುವ ಹಕ್ಕು ನೀಡಿದೆ. ಇದರಿಂದ ಯಾರಿಗೆ ತೊಂದರೆಯಾಗುತ್ತಿದೆ? ಬಿಜೆಪಿಯವರು ನಿಜವಾದ ದೇಶ ವಿರೋಧಿಗಳು. ಆಪ್ ಕಂಡರೆ ಅವರಿಗೆ ಭಯ, ಅದಕ್ಕಾಗಿ ಸುಳ್ಳು ದೂರು ನೀಡುತ್ತಿದ್ದಾರೆ” ಎಂದಿದ್ದಾರೆ.
ಜಾತಿ ಆಧಾರಿತ ರಾಜಕೀಯ ಮಾಡುವವರು ದ್ರೋಹಿಗಳು. ಅವರಿಗೆ ಬೇರೆ ಯಾವುದೇ ಅಜೆಂಡಾಗಳಿಲ್ಲ. ಧರ್ಮ ಧರ್ಮದ ನಡುವೆ ಎತ್ತಿಕಟ್ಟುವುದು ಅವರ ಚಾಳಿ. ಅವರು ಆಪ್ ಕಾರ್ಯಕರ್ತರು ಏಕೆ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಪ್ರಶ್ನಿಸುತ್ತಾರೆ. ನನ್ನ ಪ್ರಕಾರ ಯಾರಿಗೆ ಯಾವ ಧರ್ಮದ ಮೇಲೆ ನಂಬಿಕೆಯಿದೆಯೊ ಅವರು ಆಯಾದ ಧರ್ಮದ ಪೂಜಾಸ್ಥಳಿಗೆ ಹೋಗುವ ಹಕ್ಕು ಹೊಂದಿದ್ದಾರೆ. ನನಗೆ ಬೌದ್ಧ ಧರ್ಮದ ಮೇಲೆ ನಂಬಿಕೆಯಿದೆ. ಹಾಗಾಗಿ ನಾನು ಅಲ್ಲಿಗೆ ಹೋಗುತ್ತೇನೆ. ಯಾರಿಗೂ ಇನ್ನೊಂದು ಧರ್ಮವನ್ನು ಹೇರುವ ಅಧಿಕಾರವಿಲ್ಲ” ಎಂದು ರಾಜೇಂದ್ರ ಪಾಲ್ ಗೌತಮ್ ತಿಳಿಸಿದ್ದಾರೆ.