

ಮೆಕ್ಸಿಕೋದಲ್ಲಿ ಭಾರಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಮೇಯರ್ ಸೇರಿ 18 ಜನ ಮೃತಪಟ್ಟಿದ್ದಾರೆ. ಮೆಕ್ಸಿಕೋದ ಸ್ಯಾನ್ ಮಿಗುಯೆಲ್ ಟೊಟೊಲಾಪನ್ನಲ್ಲಿರುವ(San Miguel Totolapan) ಸಿಟಿ ಹಾಲ್‌ನಲ್ಲಿ ದುಷ್ಕರ್ಮಿಗಳು ಮನ ಬಂದಂತೆ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಸುಮಾರು 18 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೇಯರ್ ಕೂಡ ಸೇರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕೆಲ ಬಂದೂಕುಧಾರಿಗಳು ಮೆಕ್ಸಿಕೋದ ಸ್ಯಾನ್ ಮಿಗುಯೆಲ್ ಟೊಟೊಲಾಪಾನ್‌ನಲ್ಲಿರುವ ಸಿಟಿ ಹಾಲ್ ಮತ್ತು ಹತ್ತಿರದ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಮಾರು 18 ಜನರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ ಗುರೆರೊ ರಾಜ್ಯದ ಸ್ಯಾನ್ ಮಿಗುಯೆಲ್ ಟೊಟೊಲಾಪಾನ್‌ನಲ್ಲಿರುವ ಸಿಟಿ ಹಾಲ್‌ನಲ್ಲಿ ಬಂದೂಕುಧಾರಿಗಳ ಗುಂಪು ಗುಂಡು ಹಾರಿಸಿದ್ದು ಗೋಡೆಗಳ ಮೇಳೆ ಗುಂಡಿನ ದಾಳಿಗೆ ಸಾಕ್ಷಿ ಎಂಬಂತೆ ರಂಧ್ರಗಳು ಕಂಡು ಬಂದಿವೆ. ಗುಂಡುಗಳು ಗೋಡೆಗೆ ತಾಕಿ ರಂಧ್ರಗಳು ಸೃಷ್ಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಷಯ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಗೆ ಮನೆಗಳ ಮುಂದೆ ಗುಂಡಿನ ದಾಳಿಗೆ ಮೃತಪಟ್ಟವರ ದೇಹಗಳು ಸಿಕ್ಕಿವೆ. ಮೃತರಲ್ಲಿ ಮೇಯರ್ ಕಾನ್ರಾಡೊ ಮೆಂಡೋಜಾ, ಅವರ ತಂದೆ ಮತ್ತು ಮಾಜಿ ಮೇಯರ್ ಜುವಾನ್ ಮೆಂಡೋಜಾ ಮತ್ತು ನಗರದ ಇತರೆ ಅಧಿಕಾರಿಗಳು ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಈ ದಾಳಿಯು ಇತ್ತೀಚೆಗೆ ನಡೆದ ಮೆಕ್ಸಿಕೊವನ್ನು ಬೆಚ್ಚಿಬೀಳಿಸಿದ ಮೂರನೇ ದಾಳಿಯಾಗಿದೆ. ಸೆಪ್ಟೆಂಬರ್ 21 ರ ರಾತ್ರಿ, ಗ್ವಾನಾಜುವಾಟೊದಲ್ಲಿನ ಬಾರ್‌ನಲ್ಲಿ ಬಂದೂಕುಧಾರಿಗಳ ಗುಂಪು ಗುಂಡು ಹಾರಿಸಿ 10 ಜನರನ್ನು ಕೊಂದಿತ್ತು. ಮತ್ತು ಕೇವಲ ಒಂದು ವಾರದ ನಂತರ, ಉತ್ತರ ಮೆಕ್ಸಿಕೋದಲ್ಲಿ ಮತ್ತೊಂದು ದಾಳಿ ನಡೆದಿತ್ತು.