

ನವದೆಹಲಿ: ಇನ್ಮುಂದೆ ಪಿಯುಸಿ (Pollution Under Control) ಪ್ರಮಾಣ ಪತ್ರ ಇದ್ದವರಿಗೆ ಮಾತ್ರವೇ ಬಂಕ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ನೀಡಲು ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ದೆಹಲಿ ಸರ್ಕಾರ (Delhi Government) ನಿರ್ಧರಿಸಿದೆ.
ನಿಯಮದ ಅನುಷ್ಠಾನ ಮತ್ತು ಕಾರ್ಯವಿಧಾನಗಳ ಬಗ್ಗೆ ಚರ್ಚಿಸಲು ಸೆಪ್ಟೆಂಬರ್ 29 ರಂದು ಕರೆಯಲಾಗಿದ್ದ ಪರಿಸರ, ಸಾರಿಗೆ ಮತ್ತು ಸಂಚಾರ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಂತೆ ಅಕ್ಟೋಬರ್ 25 ರಿಂದ ನಿಯಮ ಜಾರಿಗೆ ಬರಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷ (AAP) ಈ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೇ ಪ್ರಮಾಣಪತ್ರ ಇಲ್ಲದವರಿಗೆ ಇಂಧನ ತುಂಬುವ ಕೇಂದ್ರಗಳಲ್ಲಿ ಪೆಟ್ರೋಲ್ (Petrol), ಡೀಸೆಲ್ (Diesel) ಮಾರಾಟ ನಿಷೇಧಿಸಲಾಗುತ್ತದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ವಾಹನಗಳ ಹೊಗೆ ಪ್ರಮುಖ ಕಾರಣವಾಗಿದೆ. ಅದನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಅಕ್ಟೋಬರ್ 25 ರಿಂದ ವಾಹನಕ್ಕೆ ಪಿಯುಸಿ (PUC) ಪ್ರಮಾಣಪತ್ರವಿಲ್ಲದಿದ್ದರೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ನೀಡದಿರಲು ನಿರ್ಧರಿಸಲಾಗಿದೆ ಎಂದು ರೈ ತಿಳಿಸಿದರು.
ಮಾಲಿನ್ಯವನ್ನು ಎದುರಿಸಲು ಮತ್ತು ತಿದ್ದುಪಡಿ ಮಾಡಿದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಪರಿಣಾಮಕಾರಿ ಮತ್ತು ಗಂಭೀರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ದೆಹಲಿ ಸರ್ಕಾರವು ಅಕ್ಟೋಬರ್ 3ರಿಂದಲೇ 24*7 ವಾರ್ ರೂಂ ಪ್ರಾರಂಭಿಸಲಿದೆ. ಈ ವಾರ್‌ರೂಂ ನಿಯಮ ಉಲ್ಲಂಘನೆ, ದೂರುಗಳು ಹಾಗೂ ಗ್ರಾಹಕರ ಕುಂದುಕೊರತೆಗಳ ಮೇಲ್ವಿಚಾರಣೆ ಮಾಡಲಿದೆ ಎಂದು ರೈ ತಿಳಿಸಿದ್ದಾರೆ.