

ಚಾಮರಾಜನಗರ / ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ‘ಭಾರತ್ ಜೋಡೋ ಯಾತ್ರಾ’ (Bharat Jodo Yatra) ಇಂದಿನಿಂದ ಕರ್ನಾಟಕದಲ್ಲಿ ಸದ್ದು ಮಾಡಲಿದೆ. ಇದನ್ನು ಕನ್ನಡದಲ್ಲಿ ‘ಭಾರತ ಐಕ್ಯತಾ ಯಾತ್ರೆ’ ಎಂದು ಕಾಂಗ್ರೆಸ್ ಅನುವಾದಿಸಿ, ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ಗೆ ಪೂರಕ ವಾತಾವರಣವಿರುವ ದೇಶದ ಕೆಲವೇ ರಾಜ್ಯಗಳ ಪೈಕಿ ಒಂದಾಗಿರುವ ಕರ್ನಾಟಕದಲ್ಲಿ ಈ ಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷವು ಇನ್ನಷ್ಟು ಬಲಿಷ್ಠವಾಗಬಹುದು ಎಂದು ಪಕ್ಷದ ನಾಯಕರು ಉತ್ಸಾಹ ತೋರಿಸುತ್ತಿದ್ದಾರೆ. ಗುಂಡ್ಲುಪೇಟೆ (Gundlupete) ತಾಲ್ಲೂಕಿನಲ್ಲಿ ಕರ್ನಾಟಕ ಪ್ರವೇಶಿಸಲಿರುವ ಯಾತ್ರೆಯು, ಕರ್ನಾಟಕದಲ್ಲಿ 22 ದಿನ ಸಂಚರಿಸಲಿದ್ದು, 511 ಕಿಮೀ ಕ್ರಮಿಸಲಿದೆ.
ಕನ್ಯಾಕುಮಾರಿಯಿಂದ ಸಂಚಾರ ಆರಂಭಿಸಿರುವ ರಾಹುಲ್ ಗಾಂಧಿ ಬೆಳಿಗ್ಗೆ 9 ಗಂಟೆಗೆ ತಮಿಳುನಾಡಿನ ಗೂಡಲೂರಿನಿಂದ ಕರ್ನಾಟಕ ಪ್ರವೇಸಿಸಲಿದ್ದಾರೆ. ಊಟಿ ಕ್ಯಾಲಿಕಟ್ ಜಂಕ್ಷನ್ ಬಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಹಲವು ಶಾಸಕರು, ಪರಿಷತ್ ಸದಸ್ಯರು ಸ್ವಾಗತ ಕೋರಲಿದ್ದಾರೆ. ನಂತರ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಅದ್ಧೂರಿ ಸ್ವಾಗತ ಕೋರಲಾಗುವುದು. ಕಾರ್ಯಕ್ರಮದಲ್ಲಿ ಸುಮಾರು 250 ಗಣ್ಯರು ಪಾಲ್ಗೊಳ್ಳಲುವ ಸಾಧ್ಯತೆಯಿದೆ. ಸ್ವಾಗತದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ, ಅನಂತರ ಭಾರತ್ ಜೋಡೋ ಯಾತ್ರೆಯ ಸಂಚಾರ ಆರಂಭವಾಗಲಿದೆ.
ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸುಮಾರು ನಾಲ್ಕು ಕಿಮೀ ಸಂಚರಿಸಲಿರುವ ಪಾದಯಾತ್ರಿಗಳು ಗುಂಡ್ಲುಪೇಟೆ ತಾಲ್ಲೂಕು ವೀರನಪುರ ಕ್ರಾಸ್ ಬಳಿ ಮಧ್ಯಾಹ್ನದ ಊಟಕ್ಕೆ ನಿಲ್ಲಲಿದ್ದಾರೆ. ಬಳಿಕ ಆದಿವಾಸಿಗಳು ಹಾಗೂ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ ಸಂತ್ರಸ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಬೆಂಡಕಳ್ಳಿ ಗೇಟ್ನಿಂದ ಮತ್ತೆ ಪಾದಯಾತ್ರೆ ಆರಂಭವಾಗಲಿದ್ದು, 7 ಗಂಟೆಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮ ತಲುಪಲಿದೆ. ಅಲ್ಲಿ ಕರ್ನಾಟಕದ ಮೊದಲ ದಿನದ ಪಾದಯಾತ್ರೆ ಮುಕ್ತಾಯವಾಗುತ್ತದೆ.
ಇಂದಿನ ಪಾದಯಾತ್ರೆಯಲ್ಲಿ ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು, ಭಾಗಿಯಾಗಲಿದ್ದಾರೆ. 7 ಕ್ಷೇತ್ರಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.