

ನವದೆಹಲಿ: ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India) ಸೇರಿದಂತೆ 9 ಸಂಘಟನೆಗಳನ್ನು ನಿಷೇಧ ಮಾಡಿರುವ ಸರ್ಕಾರದ ನಿಲುವು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರೋಧವಾಗಿದೆ. ಹಾಗಾಗಿ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಪಿಎಫ್ಐನ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (Campus Front of India) (ಸಿಎಫ್ಐ) ಘೋಷಿಸಿದೆ. ‘ಪಿಎಫ್ಐ ಮತ್ತು ಸಿಎಫ್ಐ ಕುರಿತಾಗಿ ಸರ್ಕಾರ ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವಾಗಿವೆ ಹಾಗೂ ಇವೆಲ್ಲವೂ ಸುಳ್ಳು. ಸಿಎಫ್ಐ ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪಾಲನೆ ಮಾಡಿದೆ. ಕಾನೂನಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮನೋಭಾವ ಹೊಂದಿರುವ ಮತ್ತು ಸಾಮಾಜಿಕ ಕಳಕಳಿಯುಳ್ಳ ಯುವಕರನ್ನು ಸೃಷ್ಟಿಮಾಡಲು ದಶಕಗಳ ಕಾಲ ಶ್ರಮಿಸಿದೆ’ ಎಂದು ಸಿಎಫ್ಐ ಹೇಳಿದೆ.‘ಏಕಾಏಕಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಧಕ್ಕೆಯಾಗಿದೆ. ಹಾಗಾಗಿ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹೇಳಿದೆ.
‘ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ’ ನಿಷೇಧವನ್ನು ಕಾನೂನುಬದ್ಧವಾಗಿ ಪ್ರಶ್ನಿಸುತ್ತೇವೆ: ತಮಿಳುನಾಡು PFI ಮುಖ್ಯಸ್ಥನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ತಮಿಳುನಾಡು ಘಟಕದ ಅಧ್ಯಕ್ಷ ಮೊಹಮ್ಮದ್ ಶೇಕ್ ಅನ್ಸಾರಿ ಅವರು ಪಿಎಫ್ಐ ಸಂಘಟನೆಯು ನಿಷೇಧದ ವಿರುದ್ಧ ಕಾನೂನು ಹೋರಾಟ ನಡೆಸಲಿದೆ ಎಂದು ಬುಧವಾರ ಹೇಳಿಕೆ ನೀಡಿದ್ದಾರೆ. “ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಈ ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಷೇಧವನ್ನು ನಾವು ಪ್ರಶ್ನಿಸುತ್ತೇವೆ” ಎಂದು ಮೊಹಮ್ಮದ್ ಶೇಕ್ ಅನ್ಸಾರಿ ಅವರು ಹೇಳಿಕೆ ಹೊರಡಿಸಿದ್ದಾರೆ.