

ಬೆಂಗಳೂರು: ಪಿಎಫ್ಐ ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಪಕ್ಷವು ಸ್ವಾಗತಿಸಿದೆ. ‘ಸಂವಿಧಾನದ ಆಶಯಕ್ಕೆ ಹಾಗೂ ಭಾರತದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿಕೊಂಡೇ ಬಂದಿದೆ. ಪಿಎಫ್ಐ ಸೇರಿದಂತೆ ಸಮಾಜದಲ್ಲಿ ದ್ವೇಷ ಬಿತ್ತುವ, ಶಾಂತಿ, ಸಾಮರಸ್ಯ ಕದಡುವ ಯಾವುದೇ ಸಂಘಟನೆಯ ನಿಷೇಧಿಸುವುದನ್ನು ಕಾಂಗ್ರೆಸ್ ಪಕ್ಷವು ಸ್ವಾಗತಿಸುತ್ತದೆ’ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿದೆ.
ಪಿಎಫ್ಐ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಸಿದ್ದರಾಮಯ್ಯ, ಕಾನೂನು ವಿರುದ್ಧವಾಗಿ ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳಿ. ಯಾರು ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಅದೇ ರೀತಿ ಆರ್ಎಸ್ಎಸ್ನವರೂ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ‘ನಾವು ನುಡಿದಂತೆ ನಡೆದಿದ್ದೇವೆ’ ಎಂಬ ಬಿಜೆಪಿ ಟ್ವೀಟ್ಗೆ ತಿರುಗೇಟು ಕೊಟ್ಟಿರುವ ಅವರು, ಇಷ್ಟು ದಿನ ಯಾಕೆ ಬ್ಯಾನ್ ಮಾಡಿರಲಿಲ್ಲ? ಇಷ್ಟು ದಿನ ಏನ್ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಮೈಸೂರಿನ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪಿಎಫ್ಐ ನಿಷೇಧ ಆದೇಶವು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಅನುಮಾನಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಮತಗಳನ್ನು ಗಟ್ಟಿಮಾಡಿಕೊಳ್ಳಲು ಇಂಥ ಆದೇಶ ಹೊರಡಿಸಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯ. ಪಿಎಫ್ಐ ಬ್ಯಾನ್ ಹಿಂದೆ ಸಾಕಷ್ಟು ಅನುಮಾನ ಇದೆ. 4 ದಿನದ ಹಿಂದೆ ರಿಸರ್ಚ್ ಮಾಡಿ ಬ್ಯಾನ್ ಮಾಡಿದ್ರಾ? ವಿಚಾರಣೆ ಏನಾಯಿತು? ಅವರ ಬಳಿ ಏನು ಸಿಕ್ಕಿದೆ? ಏನು ಸಂಚು ಗೊತ್ತಾಗಬೇಕಿದೆ ಎಂದು ಆಗ್ರಹಿಸಿದರು.
ದೇಶದ ಭದ್ರತೆ, ಸುರಕ್ಷತೆಗಾಗಿ ಯಾವುದನ್ನು ಬೇಕಾದರೂ ಬಂದ್ ಮಾಡಿ. ಎಲ್ಲ ಸಂಘಟನೆಗಳನ್ನು ನಿಷೇಧಿಸಿ. ಆದರೆ ಏಕೆ ನಿಷೇಧಿಸಲಾಗಿದೆ? ಅವರ ಬಳಿ ಸಿಕ್ಕಿರುವ ದಾಖಲೆಗಳೇನು ಎನ್ನುವುದನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದರು. ನಿಷೇಧಕ್ಕಾಗಿ ಚುನಾಯಿತ ಪ್ರತಿನಿಧಿಗಳ ಹತ್ಯೆ ಯತ್ನ ಆರೋಪ ವಿಚಾರವನ್ನು ಉಲ್ಲೇಖಿಸಲಾಗಿದೆ. ಆದರೆ ನನ್ನ ಪ್ರಕರಣದಲ್ಲೂ ಇಂಥ ಯಾವುದೇ ಅಂಶ ಪ್ರಸ್ತಾಪವಾಗಿಲ್ಲ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಹೇಳಿದ್ದಾರೆ ಎಂದು ಹೇಳಿದರು.