

ಕಾನೂನು & ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪಿಎಫ್ಐ (PFI) ಮುಖಂಡರ ಮನೆಗಳ ಮೇಲೆ ದಾಳಿ ನಡೆದಿದ್ದು 40ಕ್ಕೂ ಹೆಚ್ಚು ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ಬೆಳ್ಳಂ ಬೆಳಗ್ಗೆ ರಾಜ್ಯಾದ್ಯಂತ ಪಿಎಫ್ಐ (PFI) ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಾಗೂ 40ಕ್ಕೂ ಹೆಚ್ಚು ಮುಖಂಡರನ್ನ ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಮಂಗಳೂರು, ಕೊಪ್ಪಳ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾ., ಮೈಸೂರು, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ ಎನ್ಐಎ ದಾಳಿ ನಡೆಸಿ ನೂರಕ್ಕೂ ಹೆಚ್ಚು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಮತ್ತೆ ಕಾನೂನು & ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು 40ಕ್ಕೂ ಹೆಚ್ಚು ಮುಖಂಡರನ್ನ ವಶಕ್ಕೆಪಡೆಯಲಾಗಿದೆ
ರಾಮನಗರದಲ್ಲಿ 9 ಜನ, ಚನ್ನಪಟ್ಟಣದಲ್ಲಿ 6 ಜನ ಸೇರಿದಂತೆ 15 ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರದಲ್ಲಿ ನವಾಜ್ ಪಾಷಾ, ವಸೀಂ ಪಾಷಾ, ಸಿದ್ದಿಕ್ ಪಾಷಾ, ಅಲ್ಲಾಭಕ್ಷ್ ಇಂತಿಯಾಜ್ ಪಾಷಾ, ಶಾಬಾಜ್ ಪಾಷಾ ಸೇರಿದಂತೆ 6 ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಶಿವಮೊಗ್ಗ ಜಿಲ್ಲೆಯಲ್ಲಿ ಐವರು ಪಿಎಫ್ಐ ಮುಖಂಡರನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಉಡುಪಿ ಜಿಲ್ಲೆಯ ಹೂಡೆ, ಕುಂದಾಪುರ, ಗಂಗೊಳ್ಳಿ, ಬೈಂದೂರಿನಲ್ಲೂ ರೇಡ್ ಆಗಿದ್ದು ನಾಲ್ವರು PFI ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ. ಕಲಬುರಗಿಯಲ್ಲಿ ಹುಸೇನ್ ಎಂಬ ಓರ್ವ PFI ಮುಖಂಡನನ್ನು ವಶಕ್ಕೆ ಪಡೆಯಲಾಗಿದ್ದು.
ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ PFI ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್ ಸೇರಿ ಇಬ್ಬರು ಪಿಎಫ್ಐ ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ. ರಾಯಚೂರಿನಲ್ಲೂ ಮೊಹ್ಮದ್ ಇಸ್ಮಾಯಿಲ್, ಆಸೀಂ ಸೇರಿ ಇಬ್ಬರು PFI ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.