

ಬಿಜೆಪಿ ಹಿಂದೂ ರಾಷ್ಟ್ರ ಮಾಡುತ್ತಿಲ್ಲ ಬದಲಿಗೆ ಬ್ರಾಹ್ಮಣ್ಯ ರಾಷ್ಟ್ರ ಮಾಡುತ್ತಿದೆ
ಬೆಂಗಳೂರು: ಎಸ್ಡಿಪಿಐ ಹುಟ್ಟುಹಾಕಿದ್ದು ಮುಸ್ಲಿಮರೇ ಇರಬಹುದು. ಆದರೆ ಎಸ್ಡಿಪಿಐಯಲ್ಲಿ (SDPI) ಹಿಂದೂಗಳು ಅನೇಕರಿದ್ದಾರೆ. ನಾನು ಒಬ್ಬ ಹಿಂದೂ ಆಗಿದ್ದು, ಎಸ್ಡಿಪಿಐ ಅನ್ನು ಮುಸ್ಲಿಂ ಪಕ್ಷವೆಂದು ಯಾಕೆ ಕರೆಯುತ್ತಿರಿ ಎಂದು ಎಸ್ಡಿಪಿಐ ಮುಖಂಡ ದೇವನೂರು ಪುಟ್ಟನಂಜಯ್ಯ ಪ್ರಶ್ನಿಸಿದರು.
ಪಿಎಫ್ಐ ಕಾರ್ಯಕರ್ತರನ್ನ ಬಂಧಿಸಿರೋದನ್ನ ಖಂಡಿಸಿ ಬೆಂಗಳೂರಿನ (Bengaluru) ಎಸ್ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್ಡಿಪಿಐ ಹುಟ್ಟುಹಾಕಿದ್ದು ಮುಸ್ಲಿಮರೇ ಇರಬಹುದು. ಆದರೆ ನಾವೆಲ್ಲ ಹಿಂದೂಗಳೇ, ನಾನು ನಿವೃತ್ತ ಡಿಡಿಪಿಐ. ಎಸ್ಡಿಪಿಐನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಾನು ಬೇಕಾದರೆ ರಾಜ್ಯಾಧ್ಯಕ್ಷ ಆಗಬಹುದು ಎಂದರು.

ಇಂದು ಬ್ರಾಹ್ಮಣವಾದಿಗಳು, ಮನುವಾದಿಗಳು ಸಂವಿಧಾನ ಕಟ್ಟಿ ಹಾಕಿದ್ದಾರೆ. ಎಸ್ಡಿಪಿಐ, ಪಿಎಫ್ಐ ಧರ್ಮದ ಬಗ್ಗೆ ಎಲ್ಲೂ ಮಾತನಾಡಿಲ್ಲ. ರಾಷ್ಟ್ರದ ಬಗ್ಗೆ ಎಸ್ಡಿಪಿಐ ಧ್ವನಿ ಎತ್ತುತ್ತಿದೆ. ದೇಶ ಇವತ್ತು ಗಂಡಾಂತರದಲ್ಲಿದೆ. ಕೊರೊನಾ ಬಂದಾಗ ಹೆಣಗಳನ್ನು ಯಾರು ಮುಟ್ಟಲಿಲ್ಲ. ಆದರೆ ಎಸ್ಡಿಪಿಐ ಹೆಣ ಎತ್ತುವ ಕೆಲಸ ಮಾಡಿದೆ ಎಂದರು.
ದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದಾವೆ. ಆದರೆ ಮೋದಿ (Narendra Modi) ಈ ಬಗ್ಗೆ ಒಂದೇ ಒಂದು ಪ್ರೆಸ್ಮೀಟ್ ಮಾಡಿಲ್ಲ. ಬಿಜೆಪಿಯವರು (BJP) ಹಿಂದೂ ರಾಷ್ಟ್ರ ಮಾಡುತ್ತಿಲ್ಲ. ಬದಲಿಗೆ ಬ್ರಾಹ್ಮಣ್ಯ ರಾಷ್ಟ್ರ ಮಾಡುತ್ತಿದ್ದಾರೆ. ಹಿಂದೂ ಅಂತ ಯುವಕರನ್ನು ಎತ್ತುಕಟ್ಟುತ್ತಾರೆ. ಆಯುಧ ಕೊಟ್ಟು ಕಳುಹಿಸುತ್ತಿದ್ದಾರೆ. ಅಡ್ವಾಣಿ ರಥ ಯಾತ್ರೆ ಮಾಡಿ, ಸಾವಿರಾರು ಜನ ಕೊಂದರು ಎಂದು ಕಿಡಿಕಾರಿದ ಅವರು, ಮನೆಯಲ್ಲಿ ಅವರ ಧರ್ಮ ಆಚರಿಸೋಣ. ಎಲ್ಲರ ಮನಸ್ಸು ಒಂದಾಗುವಂತೆ ಮಾಡೋಣ ಎಂದು ಮನವಿ ಮಾಡಿದರು.