

ಜೈಪುರ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಕಾಂಗ್ರೆಸ್ನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮಂದಾಗುತ್ತಿದ್ದಂತೆ ರಾಜಸ್ಥಾನದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಶಾಸಕರ (MLAs) ಜೊತೆ ಸಂಧಾನ ಮಾತುಕತೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಹಿರಿಯ ನಾಯಕರು ಮರಳಿ ದೆಹಲಿಗೆ ವಾಪಸ್ ಆಗಿದ್ದಾರೆ. ಈ ಹೈಡ್ರಾಮಾದ ನಡುವೆ ರಾಜಸ್ಥಾನದಲ್ಲೂ ಬಿಜೆಪಿ (BJP) ಸರ್ಕಾರ ರಚಿಸಲು ಅವಕಾಶವೊಂದು ಕೂಡಿಬಂದಿದೆ.
ಈ ಎಐಸಿಸಿ (AICC) ಅಧ್ಯಕ್ಷ ಹುದ್ದೆಗೆ ಗೆಹ್ಲೋಟ್ ಸ್ಪರ್ಧಿಸುತ್ತಿರುವ ಕಾರಣ ಮತ್ತು ಕಾಂಗ್ರೆಸ್ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ನೀತಿ ಅನ್ವಯ ಸಿಎಂ ಹುದ್ದೆ ತ್ಯಜಿಸಲು ಗೆಹ್ಲೋಟ್ ಮುಂದಾಗಿದ್ದಾರೆ. ಗೆಹ್ಲೋಟ್ ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾದರೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಸ್ಥಾನವನ್ನು ಹೊಸ ತಲೆಮಾರಿನವರಿಗೆ ಕೊಡಬೇಕೆಂದು ಹೇಳಿದ್ದರು. ಈ ಕಾರಣಕ್ಕೆ ಸಚಿನ್ ಪೈಲಟ್ಗೆ (Sachin Pilot) ಸಿಎಂ ಪಟ್ಟ ಸಿಗುವ ಸಾಧ್ಯತೆ ಇತ್ತು. ಜೊತೆಗೆ ಪೈಲಟ್ ಆಯ್ಕೆಗೆ ಹೈಕಮಾಂಡ್ ಕೂಡ ಒಲವು ತೋರಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಗೆಹ್ಲೋಟ್ ಬಣದ ಶಾಸಕರು ಹೈಡ್ರಾಮಾ ನಡೆಸಿದ್ದಾರೆ. ಸಚಿನ್ ಪೈಲಟ್ ಅವರಿಗೆ ಸಿಎಂ ಸ್ಥಾನವನ್ನು ನೀಡುವ ಬದಲು ನಮ್ಮಲ್ಲಿಯೇ ಯಾರಾದರೂ ಅನುಭವಿ ರಾಜಕಾರಣಿಗಳಿಗೆ ಸಿಎಂ ಸ್ಥಾನ ನೀಡಿ ಎಂದು ಪಟ್ಟುಹಿಡಿದು ಗೆಹ್ಲೋಟ್ ಬಣದ 90 ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.
ಮುಂದೇನು?
ರಾಜಸ್ಥಾನದಲ್ಲಿ ಅಸೆಂಬ್ಲಿ ಹಾಲಿ ಸಂಖ್ಯಾ ಬಲ 200. ಬಹುಮತಕ್ಕೆ 101 ಶಾಸಕರ ಬಲ ಬೇಕು. 100 ಶಾಸಕರಿರುವ ರಾಜಸ್ಥಾನ ಕಾಂಗ್ರೆಸ್ಗೆ 6 ಬಿಎಸ್ಪಿ, 13 ಪಕ್ಷೇತರರ ಬೆಂಬಲ ನೀಡಿ ಸರ್ಕಾರ ರಚನೆಯಾಗಿತ್ತು. ಇದೀಗ ಗೆಹ್ಲೋಟ್ ಬಣದ 92 ಶಾಸಕರು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಬಲ 8ಕ್ಕೆ ಕುಸಿತ ಕಾಣಲಿದೆ. ಆಗ ಸದನದ ಬಲ 108ಕ್ಕೆ ಇಳಿಕೆಯಾಗುತ್ತದೆ. ಬಹುಮತಕ್ಕೆ 55 ಸಂಖ್ಯಾ ಬಲವಾಗಿರುತ್ತದೆ. ಹಾಗಾದಲ್ಲಿ 70 ಶಾಸಕರಿರುವ ಬಿಜೆಪಿಗೆ ಅಧಿಕಾರಕ್ಕೇರುವ ಅವಕಾಶ ಇದೆ.