

ಕೇಸರಿ ಪಕ್ಷ ತನ್ನ ಗಟ್ಟಿ ಬೇರುಗಳನ್ನು ಹೊಂದಿರುವ ದಕ್ಷಿಣ ಕನ್ನಡದಲ್ಲಿ ತನ್ನ ಪಾರುಪತ್ಯ ಮುಂದುವರೆಸುವ ಸಿದ್ಧತೆ ಈಗಾಗಲೇ ಆರಂಭಿಸಿದೆ. ಪ್ರತಿ ಪಕ್ಷಗಳ ಅಸ್ತ್ರದ ನಡುವೆಯೂ ಜನರ ವಿಶ್ವಾಸ ಗಳಿಸಲು ತಂತ್ರಗಳನ್ನು ಹೆಣೆಯುತ್ತಿದೆ. ಸದ್ಯ ಕರಾವಳಿ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ (Belthangady) ರಾಜಕೀಯ ಸ್ಥಿತಿಗತಿ ಹೇಗಿದೆ? ಇಲ್ಲಿನ ಟಿಕೆಟ್ ಆಕಾಂಕ್ಷಿಗಳು ಯಾರು? ಪಕ್ಷ ಯಾರನ್ನು ತನ್ನ ಅಭ್ಯರ್ಥಿಯನ್ನಾಗಿಸಲು ಬಯಸುತ್ತಿದೆ? ಜಾತಿ ಲೆಕ್ಕಾಚಾರ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳ ಉತ್ತರ ಹೀಗಿದೆ ನೋಡಿ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಇನ್ನು ಕೆಲವೇ ಸಮಯ ಬಾಕಿ ಇದೆ. ಹೀಗಿರುವಾಗ ಇತ್ತ ರಾಜಕೀಯ ನಾಯಕರು ಮತದಾರರನ್ನು ನೆನಪಿಸಿಕೊಳ್ಳಲು ಆರಂಭಿಸಿದ್ದಾರೆ. ಒಂದೆಡೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ವೈಫಲ್ಯಗಳನ್ನು ಜನರಿಗೆ ತೋರಿಸುತ್ತಿದ್ದರೆ, ಇತ್ತ ಆಡಳಿತ ಪಕ್ಷ ಕೊನೆಯ ಪ್ರಯತ್ನವೆಂಬಂತೆ ಅಭಿವೃದ್ಧಿ ಕಾರ್ಯಕ್ರಮಗಳತ್ತ ಚಿತ್ತ ನೆಟ್ಟಿದೆ. ಈ ಪೈಪೋಟಿಯಲ್ಲಿ ಯಾರು ಯಶಸ್ಸು ಪಡೆಯುತ್ತಾರೆಂಬುವುದೇ ಕುತೂಹಲದ ಪ್ರಶ್ನೆ. ಇನ್ನು ಹೀಗಿರುವಾಗ ಕೇಸರಿ ಪಕ್ಷ ತನ್ನ ಗಟ್ಟಿ ಬೇರುಗಳನ್ನು ಹೊಂದಿರುವ ದಕ್ಷಿಣ ಕನ್ನಡದಲ್ಲಿ ಪಾರುಪತ್ಯ ಮುಂದುವರೆಸುವ ಸಿದ್ಧತೆ ಈಗಾಗಲೇ ಆರಂಭಿಸಿದೆ. ಪ್ರತಿ ಪಕ್ಷಗಳ ಅಸ್ತ್ರದ ನಡುವೆಯೂ ಜನರ ವಿಶ್ವಾಸ ಗಳಿಸಲು ತಂತ್ರಗಳನ್ನು ಹೆಣೆಯುತ್ತಿದೆ. ಸದ್ಯ ಕರಾವಳಿ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ (Belthangady) ರಾಜಕೀಯ ಸ್ಥಿತಿಗತಿ ಹೇಗಿದೆ? ಇಲ್ಲಿನ ಟಿಕೆಟ್ ಆಕಾಂಕ್ಷಿಗಳು ಯಾರು? ಪಕ್ಷ ಯಾರನ್ನು ತನ್ನ ಅಭ್ಯರ್ಥಿಯನ್ನಾಗಿಸಲು ಬಯಸುತ್ತಿದೆ? ಜಾತಿ ಲೆಕ್ಕಾಚಾರ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳ ಉತ್ತರ ಹೀಗಿದೆ ನೋಡಿ.
ಚಾರ್ಮಾಡಿ-ಶಿರಾಡಿ ಮತ್ತು ಕುದುರೆಮುಖ ಘಟ್ಟದ ಬೆಟ್ಟಸಾಲುಗಳ ಬುಡದಲ್ಲಿರುವ ಬೆಳ್ತಂಗಡಿ ದಕ್ಷಿಣ ಕನ್ನಡದ ಅತಿ ವಿಸ್ತಾರವಾದ ತಾಲೂಕು. ಇಲ್ಲಿನ ಬಹುತೇಕ ಜನರು ತೋಟಗಾರಿಕೆ, ಹೈನುಗಾರಿಕೆ, ಕೃಷಿ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಇನ್ನು ಹಚ್ಚ ಹಸಿರಿನ ಪ್ರಕೃತಿಯ ಮಧ್ಯೆ ಶಾಂತಿಯುತವಾಗಿದ್ದ ಬೆಳ್ತಂಗಡಿ ಇತ್ತೀಚೆಗೆ ಕೋಮು ಸೂಕ್ಷ್ಮ ಪ್ರದೇಶವಾಗಿ ಮಾರ್ಪಾಡಾಗಿದೆ. ಇತರ ತಾಲೂಕುಗಳಲ್ಲಿ ಸದ್ದು ಮಾಡುವ ಕೋಮು ಗಲಭೆಯ ಬಿಸಿ ಇಲ್ಲಿಯೂ ಆವರಿಸುತ್ತದೆ. ಹೀಗಾಗಿ ಧರ್ಮಗಳ ನಡುವಿನ ಕಲಹ ಇಲ್ಲಿಯೂ ಸಾಮಾನ್ಯವಾಗಿದೆ. ಅಚ್ಚ ತುಳುವ ಸಂಸ್ಕೃತಿಯ ಬೆಳ್ತಂಗಡಿಯ ಉದ್ದಗಲದಲ್ಲಿ ಭೂತಕೋಲ, ದೈವಾರಾಧನೆ, ನಾಗಾರಾಧನೆಯಷ್ಟೇ ಪ್ರಖರವಾಗಿ ತೆಂಕುತಿಟ್ಟಿನ ಯಕ್ಷಗಾನದ ಗಾನ-ತಾಳ-ನೃತ್ಯ ವೈಭವ ಹಾಸುಹೊಕ್ಕಾಗಿದೆ. ತುಳು ಇಲ್ಲಿಯ ಜನರು ಆಡುವ ಪ್ರಮುಖ ಭಾಷೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಬೆಳ್ತಂಗಡಿಯಲ್ಲಿ 84 ಗ್ರಾಮಗಳಿವೆ. ಇನ್ನು ಇಲ್ಲಿನ ರಾಜಕಾರಣವನ್ನು ಗಮನಿಸಿದರೆ, ದಕ್ಷಿಣ ಕನ್ನಡದ ಉಳಿದ ಕ್ಷೇತ್ರಗಳಂತೆ ಇದು ಕೇಸರಿ ಪಡೆಯ ಭದ್ರಕೋಟೆ ಅಲ್ಲ ಎಂಬುವುದು ಈವರೆಗಿನ ಚುನಾವಣೆಗಳ ಫಲಿತಾಂಶ ಸ್ಪಷ್ಟಪಡಿಸಿದೆ. ಕೈ ಹಾಗೂ ಕಲಮ ಪಾಳಯ ನಡುವಿನ ಪೈಪೋಟಿ ಇಲ್ಲಿ ಮುಂದುವರೆದಿದೆ. ಇನ್ನು ಭಾರತದ ಪ್ರಖ್ಯಾತ ದೇವಸ್ಥಾನ ಎಂದೆನಿಸಿಕೊಂಡಿರುವ ಧರ್ಮಸ್ಥಳ ದೇವಾಲಯವೂ ಇಲ್ಲಿನ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಇಲ್ಲದೆ ಬೆಳ್ತಂಗಡಿಯಲ್ಲಿ ರಾಜಕಾರಣ ಮಾಡುವುದು ಅಥವಾ ಆಕಾಂಕ್ಷಿಗಳು ಯಾವುದೇ ಪಕ್ಷದ ಟಿಕೆಟ್ ಗಳಿಸಿಕೊಳ್ಳುವುದು ಕಷ್ಟವೆಂಬುದು ಸಾರ್ವತ್ರಿಕ ಅನಿಸಿಕೆಯಾಗಿದೆ. .
ಪ್ರಮುಖ ಆಕಾಂಕ್ಷಿಗಳು ಯಾರು?
ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತಿದ್ದು, ಇವೆರಡು ಪಕ್ಷದ ಅಭ್ಯರ್ಥಿಗಳೇ ಹೆಚ್ಚಿನ ಪ್ರಮಾಣದ ಮತ ಗಳಿಸುತ್ತಾರೆ. ಇಲ್ಲಿನ ಪ್ರಮುಖ ನಾಯಕರು ತಮ್ಮದೇ ಬಣ ಕಟ್ಟಿಕೊಂಡಿದ್ದು, ಟಿಕೆಟ್ಗಾಗಿ ಕಿತ್ತಾಡುವುದು ಪ್ರತೀ ಬಾರಿ ಚುನಾವಣೆಯಲ್ಲಿ ಕಂಡು ಬರುತ್ತದೆ ಎನ್ನಲಾಗಿದೆ,
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಯಾರು?
ಹರೀಶ್ ಪೂಂಜಾ, ಹಾಲಿ ಶಾಸಕ: ಕಳೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ಹಲವಾರು ಹೊಸ ಮುಖಗಳು ಗೆದ್ದು ಬಂದಿದ್ದವು. ಅದರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡಾ ಒಬ್ಬರು. ಮೊದಲ ಬಾರಿ ಗೆಲುವು ಸಾಧಿಸಿದ ಅವರು ವಿಧಾನಸಭೆ ಪ್ರವೇಶಿಸಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಹರೀಶ್ ಪೂಂಜಾ, ಇವರ ಜನಪ್ರಿಯತೆ ಯಾವ ಮಟ್ಟಕ್ಕಿದೆ ಎಂದರೆ ರಕ್ಷಿಣ ಕನ್ನಡದ ಬೇರೆ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲಬಹುದಾದ ತಾಕತ್ತುಳ್ಳವರಾಗಿದ್ದಾರೆ. ಈ ಹಿಂದೆ ಗಣಿ ಧಣಿ ಜನಾರ್ದನ ರೆಡ್ಡಿ ಕಂಪನಿಯ ಲೀಗಲ್ ಎಡ್ವೈಸರ್ ತಂಡದಲ್ಲಿ ಜೂನಿಯರ್ ಆಗಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಹೀಗಿರುವಾಗ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಪೂಂಜಾ ಕಣಕ್ಕಿಳಿಯುವ ಸಾಧ್ಯತೆ ಇದೆ.
ವಸಂತ್ ಬಂಗೇರ: ಮಾಜಿ ಶಾಸಕರಾಗಿರುವ ವಸಂತ್ ಬಂಗೇರ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆರಂಭದಲ್ಲಿ ಬಿಜೆಪಿ ನಾಯಕರಾಗಿದ್ದ ವಸಂತ್ ಬಂಗೇರ ತದನಂತರ ಜೆಡಿಎಸ್ಗೆ ಸೇರಿದ್ದರು. ಬಳಿಕ ಇಲ್ಲಿಯೂ ಅಸಮಾಧಾನಗೊಂಡಿದ್ದ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು, ಮತದಾರರು ನಾಯಕನೊಬ್ಬನನ್ನು ನೋಡಿ ಮತ ನೀಡುತ್ತಾರೆ ಎಂಬುವುದಕ್ಕೆ ವಸಂತ್ ಬಂಗೇರ ಸೂಕ್ತ ಸಾಕ್ಷಿಯಾಗಿದ್ದಾರೆ. ಪಕ್ಷ ನೋಡದೇ ಜನರು ಅವರಿಗೆ ಮತ ನೀಡಿದ್ದಾರೆ. ಅಲ್ಲದೇ ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಹತಾಶೆಯಿಂದ ಕಾಂಗ್ರೆಸ್ ಸೇರಿರುವ ಪ್ರಬಲ ಒಕ್ಕಲಿಗ ಸಮುದಾಯದ ರಂಜನ್ ಗೌಡ ಅವರೂ ವಸಂತ ಬಂಗೇರರ ಬೆನ್ನಿಗಿದ್ದಾರೆನ್ನಲಾಗಿದೆ.

ರಕ್ಷಿತ್ ಶಿವರಾಂ: ಇವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬಿ. ಕೆ. ಹರಿಪ್ರಸಾದ್ ಅವರ ಸಹೋದರ ಬಿ.ಕೆ.ಶಿವರಾಮ್ ಮಗ. ರಕ್ಷಿತ್ ತಾಯಿಯ ತವರು ಬೆಳ್ತಂಗಡಿಯಲ್ಲಿದೆ. ರಕ್ಷಿತ್ ಓದಿ ಬೆಳೆದಿದ್ದು ಬೆಳ್ತಂಗಡಿಯಲ್ಲಿ. ಕಾಂಗ್ರೆಸ್ ಶಾಸಕರಾಗುವ ಆಸೆಯಲ್ಲಿ ರಾಜಕಾರಣ ಮಾಡುತ್ತಿರುವ ರಕ್ಷಿತ್‌ಗೆ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಬಣದ ಬೆಂಬಲವಿದೆಯೆನ್ನಲಾಗುತ್ತಿದೆ.

ಇನ್ನು ಬೆಳ್ತಂಗಡಿ ಕ್ಷೇತ್ರದ ಒಟ್ಟು ಮತರಾರರೆಷ್ಟು? ಯಾವ ಜಾತಿಯ ಜನರಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಒಟ್ಟು ಮತದಾರರು | 218880 |
ಬಿಲ್ಲವ | 60000 |
ಒಕ್ಕಲಿಗ | 45000 |
ಮುಸ್ಲಿಂ | 30000 |
ಎಸ್ಸಿ/ಎಸ್ಟಿ | 25000 |
ವಿಶ್ವಕರ್ಮ | 4000 |
ಕುಲಾಲ್ | 3000 |
2018 ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿಯ ಹರೀಶ್ ಪೂಂಜಾ ಗೆಲುವು ಸಾಧಿಸಿದ್ದರು. ಹೀಗಿತ್ತು 2018ರ ಫಲಿತಾಂಶ.
ಅಭ್ಯರ್ಥಿ ಹೆಸರು | ಮತಗಳು | |
ಬಿಜೆಪಿ | ಹರೀಶ್ ಪೂಂಜಾ | 98,417 |
ಕಾಂಗ್ರೆಸ್ | ವಸಂತ್ ಬಂಗೇರ | 75,443 |