

ಬೀಜಿಂಗ್: ಚೀನಾದಲ್ಲಿ(China) ಸೇನೆಯ ಕ್ಷಿಪ್ರ ಕ್ರಾಂತಿ ನಡೆಯುತ್ತಿದ್ದು, ಅಧ್ಯಕ್ಷ ಕ್ಸಿ ಜಿನ್‍ಪಿಂಗ್(Xi Jinping ) ಅವರನ್ನು ಗೃಹ ಬಂಧನದಲ್ಲಿ(House Arrest) ಇರಿಸಲಾಗಿದೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡುತ್ತಿದೆ.
ರಾಜಧಾನಿ ಬೀಜಿಂಗ್(Beijing) ಈಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(PLA) ನಿಯಂತ್ರಣದಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವರದಿಗಳು ಹೇಳಿವೆ.
ಬೀಜಿಂಗ್‍ನಲ್ಲಿ ಸುಮಾರು 6 ಸಾವಿರ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರೈಲು ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇತರೆ ಭಾಗದಿಂದ ನಗರದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸುಮಾರು 80 ಕಿಮೀ ಉದ್ದದ ಬೃಹತ್ ಸೇನಾ ತಂಡ ಬೀಜಿಂಗ್ ಕಡೆ ಸಾಗುತ್ತಿರುವುದು ವಿಡಿಯೋಗಳಲ್ಲಿ ಕಾಣಿಸಿದೆ. ಸೆ. 22ರಂದು ಪಿಎಲ್‍ಎ ಸೇನಾ ವಾಹನಗಳು ಬೀಜಿಂಗ್ ಕಡೆ ತೆರಳಿವೆ ಎಂದು ವರದಿಯಾಗಿದೆ.
ಚೀನಾದಲ್ಲಿ ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಚೀನಾ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಪ್ರಕಟಣೆ ತಿಳಿಸಿಲ್ಲ. ಸಮರ್‌ಖಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಜಿನ್‌ಪಿಂಗ್ ಭಾಗವಹಿಸಿದ್ದರು. ಆದರೆ ಇತರ ನಾಯಕರು ಭಾಗವಹಿಸಿದ್ದ ಔತಣಕೂಟದಲ್ಲಿ ಅವರು ಉಪಸ್ಥಿತರಿರಲಿಲ್ಲ. ಕೋವಿಡ್ 19 ಕಾರಣಕ್ಕೆ ಅವರು ಗೈರಾಗಿದ್ದಾರೆ ಎಂದು ತಿಳಿಸಲಾಗಿದ್ದರೂ, ಅದು ಎಲ್ಲರೂ ಒಪ್ಪಬಹುದಾದ ಕಾರಣವಾಗಿರಲಿಲ್ಲ.
ಬೀಜಿಂಗ್‌ನಲ್ಲಿ ಬುಧವಾರ ನಡೆದ ರಾಷ್ಟ್ರೀಯ ರಕ್ಷಣಾ ಮತ್ತು ಸೇನಾ ಸುಧಾರಣೆ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಕೂಡ ಉಪಸ್ಥಿತರಿರಲಿಲ್ಲ ಎಂದು ಹೇಳಲಾಗುತ್ತಿದೆ. ಉಜ್ಬೇಕಿಸ್ತಾನ್‌ನಿಂದ ಬೀಜಿಂಗ್‌ಗೆ ಹಿಂತಿರುಗಿದ್ದರೂ, ಆರ್ಮಿ ಕಮಾಂಡರ್ ಲಿಯು ಝೆನ್ಲಿ ಮತ್ತು ಉತ್ತರ ಕಮಾಂಡ್‌ನ ಉಸ್ತುವಾರಿ ಜನರಲ್ ಲಿ ಕಿಯಾಮಿಂಗ್ ಅವರಂತಹ ಹಲವಾರು ಹಿರಿಯ ಮಿಲಿಟರಿ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಅವರು ಭಾಗವಹಿಸಲಿಲ್ಲ.
ದಂಗೆಯ ‘ಸುದ್ದಿ’ಯನ್ನು ಹೆಚ್ಚಾಗಿ ಚೀನಾದ ಹೊರಗೆ ವಾಸಿಸುವ ಚೀನಾದ ಆಡಳಿತ ವಿರೋಧಿ ಕಾರ್ಯಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ನೇಪಾಳ ಮತ್ತು ತೈವಾನ್‌ನಿಂದ ಚೀನಾ ವಿರೋಧಿ ಟ್ವಿಟರ್ ಹ್ಯಾಂಡಲ್‌ಗಳು ಪೋಸ್ಟ್ ಮಾಡಿರುವುದು ಗಮನಾರ್ಹವಾಗಿದೆ.
ವಿದೇಶದ ಮಾಧ್ಯಮಗಳಿಗೆ ನಿರ್ಬಂಧ, ಫೇಸ್‌ಬುಕ್, ಟ್ವಿಟ್ಟರ್, ಯೂ ಟ್ಯೂಬ್‌ಗಳಿಗೆ ಚೀನಾದಲ್ಲಿ ನಿರ್ಬಂಧ ಇರುವುದರಿಂದ ಖಚಿತವಾಗಿ ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ.ಕ್ಸಿ ಜಿನ್‌ಪಿಂಗ್ ಗೃಹ ಬಂಧನಲ್ಲಿ ಇದ್ದಾರಾ? ಇಲ್ಲವೋ ಎನ್ನುವುದು ಶೀಘ್ರವೇ ಬಹಿರಂಗವಾಗುವ ಸಾಧ್ಯತೆಯಿದೆ.