

ನವದೆಹಲಿ (ಸೆ.20): ಕರ್ನಾಟಕ ಹಿಜಾಬ್ ಪ್ರಕರಣದಲ್ಲಿ ನಿರ್ಧರಿಸಬೇಕಾದ ಮೂಲಭೂತ ವಿಷಯವೆಂದರೆ ತರಗತಿಗಳಲ್ಲಿ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಮೇಲೆ ರಾಜ್ಯವು ಮಿತಿಗಳನ್ನು ಹೇರಬಹುದೇ ಎನ್ನುವುದಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. “ತರಗತಿಗಳಲ್ಲಿ ಮೂಲಭೂತ ಹಕ್ಕುಗಳಿಗೆ ಯಾವುದೇ ಮಿತಿಗಳಿರಬಹುದೇ? ಆ ಪ್ರಶ್ನೆಯನ್ನು ಪರಿಹರಿಸಿ,” ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ನ್ಯಾಯಪೀಠದ ಭಾಗವಾಗಿರುವ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿರಿಯ ವಕೀಲ ದುಷ್ಯಂತ್ ದವೆ ಅವರನ್ನು ಕೇಳಿದರು. “ನನ್ನ ಮೂಲಭೂತ ಹಕ್ಕನ್ನು ಎಲ್ಲಿ ಬೇಕಾದರೂ ಚಲಾಯಿಸಬಹುದು… ನಾನು ನನ್ನ ಮಲಗುವ ಕೋಣೆಯಲ್ಲಿರಲಿ, ನನ್ನ ತರಗತಿಯಲ್ಲಿರಲಿ ಅಥವಾ ನಾನು ಭಗವಂತನ ಮುಂದೆ ಇರಲಿ. ಎಲ್ಲಿ ಬೇಕಾದರೂ ನನ್ನ ಮೂಲಭೂತ ಹಕ್ಕನ್ನು ಚಲಾವಣೆ ಮಾಡಬಹುದು’ ಎಂದು ಕರ್ನಾಟಕದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ವಿದ್ಯಾರ್ಥಿ-ಅರ್ಜಿದಾರರ ಪರವಾಗಿ ದವೆ ಉತ್ತರಿಸಿದರು. ಗೌರವ ನೀಡುವ ಸ್ಥಳಗಳಿಗೆ ಹೋದಾಗ ಜನರು ತಮ್ಮ ತಲೆಯನ್ನು ಮುಚ್ಚಿಕೊಳ್ಳುವುದನ್ನು ನ್ಯಾಯಮೂರ್ತಿ ಗುಪ್ತಾ ಒಂದು ಹಂತದಲ್ಲಿ ಗಮನ ನೀಡಿ ಮಾತನಾಡಿದರು.ಒಂದು ತರಗತಿಯ ಕೋಣೆ ಎಲ್ಲಾ ಧಾರ್ಮಿಕ ಸ್ಥಳಗಳಂತೆ ಅತ್ಯಂತ ಗೌರವಾನ್ವಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಪೀಠಕ್ಕೆ ದವೆ ಉತ್ತರಿಸಿದರು. ಭಾರತದಲ್ಲಿ ಗೌರವ ನೀಡುವ ಸ್ಥಳಗಳಿಗೆ ಹೋದಾಗ ಅಲ್ಲಿ ತಲೆಯನ್ನು ಮುಚ್ಚಿಕೊಂಡು ಹೋಗುವ ಸಂಪ್ರದಾಯವಿದೆ. ನಮ್ಮ ಪ್ರಧಾನಿಯವರನ್ನೇ ನೋಡಿ. ಅವರು ಕೆಂಪುಕೋಟೆಯಿಂದ ಭಾಷಣ ಮಾಡುವಾಗ, ಅವರು ಎಲ್ಲಾ ರಾಜ್ಯಗಳ ಬಣ್ಣಗಳನ್ನು ಪ್ರತಿನಿಧಿಸುವ ಪೇಟವನ್ನು ಧರಿಸುತ್ತಾರೆ ಎಂದು ದವೆ ವಾದ ಮಾಡಿದರು. “ಧಾರ್ಮಿಕ ಆಚರಣೆ” ಏನು ವ್ಯಾಖ್ಯಾನಿಸುತ್ತದೆ ಎಂದು ದವೆ ಅವರಲ್ಲಿ ಈ ವೇಳೆ ನ್ಯಾಯಾಲಯವು ಕೇಳಿದೆ. ಹಿಜಾಬ್ ತಮ್ಮ ಧಾರ್ಮಿಕ ಗುರುತು ಮತ್ತು ನಂಬಿಕೆಗೆ ಸಮಾನಾರ್ಥಕವಾಗಿದೆ ಎಂದು ವಿದ್ಯಾರ್ಥಿಗಳು ವಾದಿಸಿದ್ದಾರೆ. ಧಾರ್ಮಿಕ ಆಚರಣೆಗಳು ಕೇವಲ ಮೇಲ್ನೋಟಕ್ಕೆ ಧರ್ಮದೊಂದಿಗೆ ಸಂಬಂಧ ಹೊಂದಿದ್ದನ್ನು ಮಾತ್ರ ಅರ್ಥೈಸುತ್ತದೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿದೆ.ಮುಸ್ಲಿಂ ಮಹಿಳೆಯರು ದರ್ಗಾಕ್ಕೆ ಹೋಗುವುದು ಅಥವಾ ಪಾರ್ಸಿಗಳು ಫೈರ್ ಟೆಂಪಲ್‌ಗೆ ಭೇಟಿ ನೀಡುವುದು ಆಯಾ ಧರ್ಮದ ಆಚರಣೆಗಳು ಎಂದು ಪೀಠ ಹೇಳಿದೆ. ಆದರೆ ‘ಧಾರ್ಮಿಕ ಆಚರಣೆ’ಯು ಉಡುಗೆಯನ್ನು ಒಳಗೊಂಡಿರುತ್ತದೆಯೇ?” ಎಂದು ನ್ಯಾಯಮೂರ್ತಿ ಗುಪ್ತಾ ಈ ವೇಳೆ ಪ್ರಶ್ನಿಸಿದ್ದಾರೆ.
ಪೂಜೆ ಮಾಡುವಾಗ ಬಿಳಿ ಅಥವಾ ಕಿತ್ತಳೆ ಬಣ್ಣದ ಧೋತಿಯಂತಹ ನಿರ್ದಿಷ್ಟ ಉಡುಗೆಯನ್ನು ಧರಿಸುವುದು ಧರ್ಮಕ್ಕೆ ಸಂಬಂಧಿಸಿರಬಹುದು ಎಂದು ಪೀಠ ಹೇಳಿದೆ. ಆದರೆ ಧಾರ್ಮಿಕ ಸ್ಥಳಗಳ ಹೊರಗೆ ನಿರ್ದಿಷ್ಟ ಉಡುಪನ್ನು ಧರಿಸುವುದು ‘ಧಾರ್ಮಿಕ ಆಚರಣೆ’ಯ ವ್ಯಾಪ್ತಿಯಲ್ಲಿದೆಯೇ? ಎಂದು ಪ್ರಶ್ನೆ ಮಾಡಿದೆ. “ಧಾರ್ಮಿಕ ಆಚರಣೆಯು ದೇವಸ್ಥಾನ ಅಥವಾ ದರ್ಗಾ ಇತ್ಯಾದಿಗಳಿಗೆ ಸೀಮಿತವಾಗಿಲ್ಲ. ಇದು ಒಬ್ಬರ ಧಾರ್ಮಿಕ ಆತ್ಮಸಾಕ್ಷಿಯ ಭಾಗವಾಗಿದೆ ಹಾಗಾಗಿ, ಒಬ್ಬ ಮುಸ್ಲಿಂ ಮಹಿಳೆಯ ಹಿಜಾಬ್ ಧರಿಸುವ ನಂಬಿಕೆಯೊಂದಿಗೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ’ ಎಂದು ದವೆ ಉತ್ತರಿಸಿದರು.