
ಬೆಂಗಳೂರು: ವಿಪಕ್ಷಗಳ ಆರೋಪಕ್ಕೆ ರಾಜ್ಯ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದ್ದು, ವಕ್ಫ್ ಆಸ್ತಿ ಒತ್ತುವರಿ ವರದಿ ಸದನದಲ್ಲಿ ಮಂಡಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ನಾಳೆ ವಿಧಾನಸಭೆಯಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. 2012 ರಲ್ಲಿ ಡಿ.ವಿ. ಸದಾನಂದ ಗೌಡ ಸಿಎಂ ಆಗಿದ್ದ ವೇಳೆ ರಾಜ್ಯ ಸರ್ಕಾರಕ್ಕೆ ವಕ್ಫ್ ಆಸ್ತಿ ಒತ್ತುವರಿ ವರದಿ ಸಲ್ಲಿಸಿತ್ತು. ಅನ್ವರ್ ಮಾಣಿಪ್ಪಾಡಿ ಅಂದಿನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದರು. 2 ಲಕ್ಷದ 30 ಕೋಟಿ ರೂ. 29 ಸಾವಿರಕ್ಕೂ ಅಧಿಕ ಎಕರೆ ಒತ್ತುವರಿ ವಕ್ಫ್ ಆಸ್ತಿ ಕುರಿತ ವರದಿ ನೀಡಲಾಗಿತ್ತು. ವರದಿಯಲ್ಲಿ 12ಕ್ಕೂ ಅಧಿಕ ಕಾಂಗ್ರೆಸ್ ಮುಖಂಡರ ಹೆಸರುಗಳು ಉಲ್ಲೇಖವಾಗಿದೆ.
ಹತ್ತು ವರ್ಷಗಳ ಹಿಂದಿನ ವರದಿಗೆ ಮರು ಜೀವ ನೀಡಲು ನಿರ್ಧಾರ ಮಾಡಿದ್ದು, ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಇಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ಪಡೆದರು. ಹತ್ತು ವರ್ಷಗಳ ಹಿಂದೆ 2ಜಿ ಸ್ಪ್ರೆಕ್ಟ್ರಂ ಹಗರಣಕ್ಕಿಂತಲೂ ದೊಡ್ಡದಾದ ಹಗರಣ ಎಂದು ಸಂಚಲನ ಸೃಷ್ಟಿಸಿತ್ತು. ಈ ಹಿಂದೆ ಡಿ.ಹೆಚ್. ಶಂಕರಮೂರ್ತಿ ಸಭಾಪತಿ ಆಗಿದ್ದ ವೇಳೆ ವಿಧಾನ ಪರಿಷತ್ತಿನಲ್ಲಿ ಮಂಡನೆಗೆ ಪ್ರಯತ್ನ ನಡೆದಿತ್ತು.