

ಬಂಟ್ವಾಳ: ಪರಿಶಿಷ್ಟ ಜಾತಿಯ ಅನುದಾನವನ್ನು ದುರ್ಬಳಕೆ ಮಾಡಿ ಇತರ ವರ್ಗದ ಜನರಿಗೆ ನೀಡಲಾಗಿದೆ ಎಂದು ಸುಳ್ಳು ಆರೋಪ ಹೊರಿಸಿ ಪುದು ಗ್ರಾಮ ಪಂಚಾಯತ್ ಎದುರು ಬಿಜೆಪಿ ನಡೆಸಿದ ಪ್ರತಿಭಟನೆ ಕೇವಲ ಚುನಾವಣಾ ದೃಷ್ಟಿಯಿಂದ ನಡೆದ ರಾಜಕೀಯ ಗಿಮಿಕ್ ಆಗಿದೆ ಎಂದು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಯಾವುದೇ ಅನುದಾನದ ಒಂದು ರೂಪಾಯಿ ಕೂಡ ಗ್ರಾಮದಲ್ಲಿ ದುರ್ಬಳಕೆ ಆಗಿಲ್ಲ. ಅವರ ಅನುದಾನವನ್ನು ಅವರಿಗೆ ಮಾತ್ರ ಬಳಕೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಆರೋಪ, ತಕರಾರು ಇದ್ದರೆ ಗ್ರಾಮದ ಯಾವುದೇ ಒಬ್ಬ ಬಂದು ದೂರು ನೀಡಿದರೂ ಅದರ ಯಾವುದೇ ರೀತಿಯ ತನಿಖೆಗೆ ಪಂಚಾಯತ್ ಸಿದ್ಧ ಇದೆ ಮತ್ತು ತನಿಖೆಗೆ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
ಎಸ್ಸಿ ಅನುದಾನವನ್ನು ಮುಸ್ಲಿಮರಿಗೆ ನೀಡಲಾಗಿದೆ ಎಂದು ಬಿಜೆಪಿ ಅಪಪ್ರಚಾರ ಮಾಡಿದೆ. ಇದು ಸುಳ್ಳು ಆರೋಪವಾಗಿದ್ದು ರಾಜಕೀಯಕ್ಕೆ ಧರ್ಮವನ್ನು ಎಳೆದು ತಂದು ಜನರ ಭಾವನೆಯನ್ನು ಕೆದಕಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದಕ್ಕೆ ಗ್ರಾಮದ ಜನತೆ ಕಿವಿಗೊಡುವುದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ರಸ್ತೆ, ನೀರು, ಆರೋಗ್ಯ, ಶಿಕ್ಷಣ, ಚರಂಡಿ ನಿರ್ಮಾಣ ಸಹಿತ ಪುದು ಗ್ರಾಮ ಹಿಂದೆದೂ ಕಾಣದಷ್ಟು ಅಭಿವೃದ್ಧಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನ ಒಂದು ರೂಪಾಯಿ ಕೂಡಾ ವ್ಯರ್ಥವಾಗದೆ ಅವರ ಮನೆ, ಕಾಲನಿಗಳಿಗೆ ಖರ್ಚು ಮಾಡಲಾಗಿದೆ ಎಂದರು.
ಬಿಜೆಪಿಯ ಪ್ರತಿಭಟನೆಯಲ್ಲಿ ಹೊರಗಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಗ್ರಾಮದ ಯಾರೂ ಈ ಪ್ರತಿಭಟನೆಗೆ ಮುಕ್ತ ಮನಸ್ಸಿನಿಂದ ಬೆಂಬಲ ನೀಡಿಲ್ಲ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಗ್ರಾಪಂ ಚುನಾವಣೆ ನಡೆಯಲಿದ್ದು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಸುಳ್ಳು ಆರೋಪ ಮತ್ತು ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸುವ ನೀಚ ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಹೇಳಿದರು.
ಎಸ್ಸಿ ಎಸ್ಟಿಗಳಿಗೆ ಮೀಸಲಾದ ಅನುದಾನ ಮಾತ್ರವಲ್ಲದೆ ಶಾಸಕ ಯು.ಟಿ.ಖಾದರ್ ಅವರ ಹಾಗೂ ಇತರ ಅನುದಾಗಳನ್ನೂ ಬಳಸಿ ಗ್ರಾಮದ ಎಸ್ಸಿ ಎಸ್ಟಿಗಳಿಗೆ ಸವಲತ್ತುಗಳನ್ನು, ಸೌಕರ್ಯಗಳನ್ನೂ ನೀಡಲಾಗಿದೆ. ಇದನ್ನು ಸಹಿಸಲಾದ ಬಿಜೆಪಿಯವರು ಪಂಚಾಯತ್ ಆಡಳಿತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಹೊರಗಿನ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿ ಜನರ ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಪಂ ಚುನಾವಣೆ ಜೊತೆ ವಿಧಾನಸಭಾ ಚುನಾವಣೆಯೂ ನಡೆಯಲಿದ್ದು ಸುಳ್ಳು ಆರೋಪಗಳನ್ನು ಹೊರಿಸಿ ಅಪಪ್ರಚಾರ ನಡೆಸುವ ಮೂಲಕ ಬಿಜೆಪಿ ಪುಕ್ಕಟೆ ರಾಜಕೀಯ ಲಾಭ ನಡೆಯಲು ಪ್ತಯತ್ನಿಸುತ್ತಿದೆ. ಈ ಎಲ್ಲಾ ಅಪಪ್ರಚಾರ, ಸುಳ್ಳು ಆರೋಪಕ್ಕೆ ಗ್ರಾಮದ ಜನರು ಬಿಜೆಪಿಯವರಿಗೆ ಸರಿಯಾದ ಸಮಯಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗ್ರಾಪಂ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.