

ಕರ್ನಾಟಕದ ವಿದ್ಯುತ್ ಉತ್ಪಾದಕ ಹಾಗೂ ವಿತರಣಾ ಕಂಪನಿಗಳು ಸಾಲದ ಹೊರೆಯಿಂದ ಬಳಲುತ್ತಿರುವ ಮಾಹಿತಿ ಸೋಮವಾರ ಬಹಿರಂಗಗೊಂಡಿದೆ. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಅಂಕಿಅಂಶದೊಂದಿಗೆ ಉತ್ತರ ನೀಡಿದ ಸಚಿವ ಸುನಿಲ್ ಕುಮಾರ್, ವಿದ್ಯುತ್ ಕಂಪನಿಗಳ ಸಾಲದ ವಿವರ ನೀಡಿದರು. ಕೆಪಿಟಿಸಿಎಲ್ (KPTCL) ಮತ್ತು ವಿವಿಧ ಎಸ್ಕಾಂಗಳು ಸೇರಿ ಒಟ್ಟು ₹ 38,975 ಕೋಟಿ ಸಾಲ ಇದೆ ಎಂದು ಸಚಿವರು ಹೇಳಿದರು. ಈ ಪೈಕಿ ಕೆಪಿಟಿಸಿಎಲ್ ₹ 9,590 ಕೋಟಿ, ಬೆಸ್ಕಾಂ ₹ 13,616 ಕೋಟಿ, ಚೆಸ್ಕಾಂ 3,536, ಮೆಸ್ಕಾಂ ₹ 1,282 ಕೋಟಿ, ಹೆಸ್ಕಾಂ 7,480 ಕೋಟಿ, ಜೆಸ್ಕಾಂ 3,472 ಕೋಟಿ ಸಾಲದಲ್ಲಿವೆ. 2002-2003 ರಿಂದ ದೊಡ್ಡ ಮೊತ್ತದ ಸಾಲ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವರು ಹೇಳಿದರು.
ವಿದ್ಯುತ್ ಸಬ್ ಸ್ಟೇಷನ್ಗಳನ್ನು ಮೇಲ್ದರ್ಜೆಗೆ ಏರಿಸಬೇಕು:ಬಿ.ಎಂ.ಫಾರೂಖ್

ಸದಸ್ಯ ಬಿ.ಎಂ.ಫಾರೂಖ್ ಪ್ರಶ್ನೆ ಕೇಳಿ, ಚಿತ್ರದುರ್ಗ-ದಾವಣಗೆರೆ-ತುಮಕೂರು ಭಾಗದಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಗ್ರೀನ್ ಕಾರಿಡಾರ್ ಸ್ಟೇಷನ್ಗಳು ಇಲ್ಲ. ಇವ್ಯಾಕ್ಯುಲೇಷನ್ ಸೌಲಭ್ಯಗಳು ಈ ಭಾಗದಲ್ಲಿ ಇಲ್ಲ. ಇದರಿಂದ ಸಣ್ಣ ಪ್ರಮಾಣದ ಪವನ ವಿದ್ಯುತ್ ಹೂಡಿಕೆದಾರರಿಗೆ ಸಮಸ್ಯೆ ಆಗಿದೆ. ವಿದ್ಯುತ್ ಸಬ್ ಸ್ಟೇಷನ್ಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಮಾಡಿದರು. ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.