

ನವದೆಹಲಿ: ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ (Gujarat Election 2022) ಮುಸಲ್ಮಾನರ (Muslims) ಮತಗಳನ್ನು ಸೆಳೆಯಲು ಬಿಜೆಪಿ ಅಲ್ಪಸಂಖ್ಯಾತ ಘಟಕ ವಿಶಿಷ್ಟ ಕಾರ್ಯತಂತ್ರವೊಂದನ್ನು ರೂಪಿಸಿದೆ. ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವ ವಿಧಾನಸಭೆ ಕ್ಷೇತ್ರಗಳಲ್ಲಿ (Legislative Assembly Seats) ಕನಿಷ್ಠ 100 ‘ಅಲ್ಪಸಂಖ್ಯಾತ ಮಿತ್ರ’ರನ್ನು ನೇಮಕ ಮಾಡಲು ಉದ್ದೇಶಿಸಿದೆ. ಈ ಎಲ್ಲರಿಗೂ ತಲಾ 50 ಮುಸ್ಲಿಂ ಮತ ತರುವ ಹೊಣೆಗಾರಿಕೆ ಹಂಚಲಾಗುತ್ತದೆ. ರಾಜಕೀಯೇತರ ಹಿನ್ನೆಲೆ ಹೊಂದಿದ ವ್ಯಕ್ತಿಗಳನ್ನು ಅಲ್ಪಸಂಖ್ಯಾತ ಮಿತ್ರರನ್ನಾಗಿ ನೇಮಕ ಮಾಡಲಾಗುತ್ತದೆ. ಈ ಸಂಬಂಧ ಬಿಜೆಪಿಯ ಅಲ್ಪಸಂಖ್ಯಾತ ಘಟಕ ಈ ಮಿತ್ರರನ್ನು ಸಂಪರ್ಕಿಸಲು ಕೆಲಸ ಆರಂಭಿಸಿದೆ. ಅಧ್ಯಾತ್ಮಿಕ ನಾಯಕರು, ವೃತ್ತಿಪರರು, ಉದ್ಯಮಿಗಳು ಹಾಗೂ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವವರು ಕೂಡ ಅಲ್ಪಸಂಖ್ಯಾತ ಮಿತ್ರರಾಗಬಹುದು ಎಂದು ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಜಮಾಲ್ ಸಿದ್ದಿಖಿ ತಿಳಿಸಿದ್ದಾರೆ.

ಇದೇ ವೇಳೆ, 25 ಸಾವಿರದಿಂದ 1 ಲಕ್ಷದವರೆಗೆ ಮುಸ್ಲಿಂ ಮತಗಳನ್ನು ಹೊಂದಿರುವ 109 ವಿಧಾನಸಭೆ ಕ್ಷೇತ್ರಗಳು ಗುಜರಾತಿನಲ್ಲಿವೆ. ಅಲ್ಲಿನ ಬೂತ್ ಸಮಿತಿಗಳಿಗೆ ಅಲ್ಪಸಂಖ್ಯಾತ ಘಟಕಗಳ ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.