

ಮಂಗಳೂರು | ಎ.ಜೆ. ಆಸ್ಪತ್ರೆಯಲ್ಲಿ ಓಯಸಿಸ್ ಫರ್ಟಿಲಿಟಿ ಸೆಂಟರ್ ನ 3ನೇ ಕೇಂದ್ರ ಉದ್ಘಾಟನೆ
ಮಂಗಳೂರು, ಸೆ.9: ಹೈದರಾಬಾದ್ ಮೂಲದ ಓಯಸಿಸ್ ಫರ್ಟಿಲಿಟಿ ಸಂಸ್ಥೆ(ಬಂಜೆತನ ನಿವಾರಣಾ ಕೇಂದ್ರ)ಯ (OASIS FERTILITY CENTRE) 3ನೇ ಕೇಂದ್ರವು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(A.J. Hospital & Research Centre) ದಲ್ಲಿ ಶುಕ್ರವಾರ ಆರಂಭಗೊಂಡಿತು.
ನೂತನ ಕೇಂದ್ರವನ್ನು ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ ಇಂದು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ಬಂಜೆತನ ನಿವಾರಣೆಗೆ ಖ್ಯಾತಿ ಪಡೆದ ಓಯಸಿಸ್ ಸಂಸ್ಥೆ ದೇಶದಲ್ಲಿ ಮೂರನೆ ಸ್ಥಾನ ಪಡೆದಿದೆ. ಈ ಸಂಸ್ಥೆಯ ಮಂಗಳೂರಿನ ಏಕೈಕ ಕೇಂದ್ರ ನಮ್ಮ ಸಂಸ್ಥೆಯಲ್ಲಿ ಆರಂಭಗೊಂಡು ಹೊಸ ಸೌಲಭ್ಯ ನಾಗರಿಕರಿಗೆ ದೊರೆಯುವಂತಾಗಿರುವುದಕ್ಕೆ ಸಂತಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಓಯಸಿಸ್ ಫರ್ಟಿಲಿಟಿಯ ಸಹ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ ಡಾ.ದುರ್ಗಾ ಜಿ. ರಾವ್, ಮಂಗಳೂರಿನ ಓಯಸಿಸ್ ಫರ್ಟಿಲಿಟಿಯ ಕ್ಲಿನಿಕಲ್ ಸಂಸ್ಥೆಯ ಹೆಡ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ.ಪ್ರಮೋದ ಲಕ್ಷ್ಮಣ್,
ಎ.ಜೆ. ಆಸ್ಪತ್ರೆಯ ವೈದ್ಯರಾದ ಡಾ.ಅಮಿತ್ ಮಾರ್ಲ ಮೊದಲಾದವರು ಉಪಸ್ಥಿತರಿದ್ದರು.
3 ವರ್ಷಗಳಲ್ಲಿ ದೇಶಾದ್ಯಂತ 50 ಕೇಂದ್ರಗಳನ್ನು ಸ್ಥಾಪಿಸುವ ಗುರಿ
ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓಯಸಿಸ್ ಫರ್ಟಿಲಿಟಿಯ ವೈಜ್ಞಾನಿಕ ಮುಖ್ಯಸ್ಥ ಮತ್ತು ಕ್ಲಿನಿಕಲ್ ಭ್ರೂಣಶಾಸ್ತ್ರಜ್ಞರು ಆಗಿರುವ ಡಾ.ಕೃಷ್ಣ ಚೈತನ್ಯ, ಓಯಸಿಸ್ ಫರ್ಟಿಲಿಟಿ ಸಂಸ್ಥೆಯನ್ನು ಪ್ರಸಿದ್ಧ ಸ್ತ್ರೀ ರೋಗ ತಜ್ಞರಾದ ಡಾ.ದುರ್ಗಾ ಜಿ. ರಾವ್ ಮತ್ತು ಶ್ರೀ ಕಿರಣ್ ಗಡೇಲಾ ಸ್ಥಾಪಿಸಿದ್ದಾರೆ. ಇದು ಗರ್ಭಧಾರಣೆಯ ಸಮಸ್ಯೆಗಳನ್ನು ಎದುರಿಸುವ ದಂಪತಿಗಳಿಗೆ ವೈಜ್ಞಾನಿಕ ಸಲಹೆ ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ಮುಂದಿನ 3 ವರ್ಷಗಳಲ್ಲಿ ಭಾರತದಾದ್ಯಂತ ಸುಮಾರು 50 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಮಂಗಳೂರಿನ ಪ್ರಸಿದ್ದ ಎ.ಜೆ. ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್, ಅರ್ಹ ದಂಪತಿಗಳಿಗೆ ಸೇವೆಗಳನ್ನು ನೀಡಲು ತನ್ನ ಕಟ್ಟಡದಲ್ಲಿ ವಿಶ್ವ ದರ್ಜೆಯ ಚಿಕಿತ್ಸೆ ಹಾಗೂ ಸವಲತ್ತುಗಳುಳ್ಳ ಕ್ಲಿನಿಕ್ ಪ್ರಾರಂಭಿಸಲು ಅನುವು ನೀಡಿ ಓಯಸಿಸ್ ಫರ್ಟಿಲಿಟಿಯೊಂದಿಗೆ ಕೈಜೋಡಿಸಿದೆ ಎಂದರು.
ಎ.ಜೆ. ಆಸ್ಪತ್ರೆಯಲ್ಲಿರುವ ಓಯಸಿಸ್ ಫರ್ಟಿಲಿಟಿ ಸೆಂಟರ್ ಪೂರ್ಣ ಪ್ರಮಾಣದ ಫಲವತ್ತತೆಯ ಚಿಕಿತ್ಸಾ ಕೇಂದ್ರವಾಗಿದೆ. ಇಲ್ಲಿ ಸ್ತ್ರೀರೋಗ ತಜ್ಞರು, ಅಂಡಾಣು ತಜ್ಞರು, ಭ್ರೂಣಶಾಸ್ತ್ರಜ್ಞರು ಮತ್ತು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಕ್ಷೇತ್ರದ ಪರಿಣತರ ಬೆಂಬಲ ದೊಂದಿಗೆ ನೂತನ ತಂತ್ರಜ್ಞಾನ ದೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ.ಕೃಷ್ಣ ಚೈತನ್ಯ ಮಾಹಿತಿ ನೀಡಿದರು.