
ಸ್ವತಂತ್ರ ಮಾಧ್ಯಮಗಳಿಗೆ ನಿಧಿ ನೀಡುವ ಸಂಸ್ಥೆ ಮೇಲಿನ ಐಟಿ ದಾಳಿಗೆ ಡಿಜಿಟಲ್ ಮಾಧ್ಯಮ ಒಕ್ಕೂಟ ಡಿಜಿಪಬ್ ತೀವ್ರ ಆಕ್ರೋಶ
ಬೆಂಗಳೂರಿನಲ್ಲಿರುವ ಇಂಡಿಪೆಂಡೆಂಟ್ ಮತ್ತು ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್, ಸರ್ಕಾರೇತರ ಸಂಸ್ಥೆ ಆಕ್ಸ್‌ಫ್ಯಾಮ್ ಇಂಡಿಯಾ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಥಿಂಕ್ ಟ್ಯಾಂಕ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ‘ಸ್ವತಂತ್ರ ಪತ್ರಿಕೋದ್ಯಮ ಮತ್ತು ಸಂಶೋಧನೆಯ ಮೇಲಿನ ದಾಳಿಯಾಗಿದೆ’ ಎಂದು ಡಿಜಿಟಲ್ ಮಾಧ್ಯಮ ಸಮೂಹವಾದ ‘ಡಿಜಿಪಬ್’ ಗುರುವಾರ ಹೇಳಿದೆ.
ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ 11 ಡಿಜಿಟಲ್ ಸುದ್ದಿ ಸಂಸ್ಥೆಗಳ ಸಂಘವಾಗಿದೆ. “ನಮ್ಮ ಸರ್ಕಾರವು ಸ್ವತಂತ್ರ ಮಾಧ್ಯಮದಿಂದ ಎಷ್ಟು ಭಯಭೀತಗೊಂಡಿದೆ ಎಂದು ಈ ದಾಳಿಗಳು ತೋರಿಸುತ್ತವೆ” ಎಂದು ಡಿಜಿಪಬ್ ಹೇಳಿದೆ.

ಬುಧವಾರ, ಆದಾಯ ತೆರಿಗೆ ಅಧಿಕಾರಿಗಳು ಸೆಂಟರ್ ಫಾರ್ ಪಾಲಿಸಿ ರಿಸರ್ಚ್, ಆಕ್ಸ್‌ಫ್ಯಾಮ್ ಇಂಡಿಯಾ ಮತ್ತು ಇಂಡಿಪೆಂಡೆಂಟ್ ಮತ್ತು ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಯಾವ ಕಾರಣಕ್ಕೆ ದಾಳಿ ನಡೆದಿದೆ ಎಂಬ ಕುರಿತು ಇಲಾಖೆಯು ಇನ್ನೂ ಹೇಳಿಕೆಯನ್ನು ನೀಡಿಲ್ಲ. ಆದರೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು, “ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯಿದೆಯ ಮೂಲಕ ಪಡೆದ ಹಣದ ರಸೀದಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ” ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ದಾಳಿಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಈ ಕ್ರಮಗಳ ಹಿಂದಿನ ಕಾರಣಗಳನ್ನು ತಿಳಿಸಲು ಆದಾಯ ತೆರಿಗೆ ಇಲಾಖೆಗೆ ಕರೆ ನೀಡಿರುವುದಾಗಿ ಡಿಜಿಪಬ್ ಗುರುವಾರ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ದಾಳಿಗಳು ನಡೆದಿರುವುದು ಇದೇ ಮೊದಲಲ್ಲ ಎಂದು ಡಿಜಿಪಬ್ ನೆನಪಿಸಿಕೊಂಡಿದೆ.
ಡಿಜಿಪಬ್ ಸ್ವತಂತ್ರ ಮತ್ತು ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ ಹಲವಾರು ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ಬೆಂಬಲಿಸುತ್ತದೆ. ಮಸುಕಾದ ಸುದ್ದಿ ಮಾಧ್ಯಮಗಳ ಈ ಸಂದರ್ಭದಲ್ಲಿ ಈ ರೀತಿಯ ಮಾಧ್ಯಮಗಳು ತೀರಾ ಅಗತ್ಯವಿದೆ ಎಂದು ಡಿಜಿಪಬ್ ಹೇಳಿದೆ.
ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮತ್ತು ಆಕ್ಸ್‌ಫ್ಯಾಮ್ ಒದಗಿಸಿದ ಮಾಹಿತಿಯು ಸಾಮಾಜಿಕ-ಆರ್ಥಿಕ ವಿಷಯಗಳ ಒಳನೋಟವನ್ನು ನೀಡುತ್ತದೆ ಎಂದು ಅದು ಹೇಳಿದೆ. “ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಇದೆಲ್ಲವೂ ಮುಖ್ಯವಾಗಿದೆ” ಎಂದು ಡಿಜಿಪಬ್ ಉಲ್ಲೇಖಿಸಿದೆ.