

ಬೆಂಗಳೂರು: ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ(61) ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ(MS Ramaiah Hospital) ಕೊನೆಯುಸಿರೆಳೆದಿದ್ದಾರೆ(Umesh Katti Passes Away). ಡಾಲರ್ಸ್ ಕಾಲೋನಿಯ ನಿವಾಸದಲ್ಲಿದ್ದಾಗ ಎದೆನೋವು ಕಾಣಿಸಿಕೊಂಡು ಬಾತ್ರೂಮ್ನಲ್ಲಿ ಕುಸಿದುಬಿದ್ದಿದ್ದರು. ಈ ವೇಳೆ ತಕ್ಷಣವೇ ಕುಟುಂಬಸ್ಥರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ ಸಚಿವ ಉಮೇಶ್ ಕತ್ತಿ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ತಡ ರಾತ್ರಿ ಸಚಿವ ಉಮೇಶ್ ಕತ್ತಿ ವಿಧಿವಶರಾಗಿದ್ದಾರೆ.
ರಾಮಯ್ಯ ಅಸ್ಪತ್ರೆಗೆ ಆರೋಗ್ಯ ಸಚಿವ ಡಾ. ಸುಧಾಕರ್, ಸಚಿವ ಮುನಿರತ್ನ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಂದಾಯ ಸಚಿವ ಅಶೋಕ್ ಭೇಟಿ ನೀಡಿದ್ದಾರೆ. ತಮ್ಮ ಎಲ್ಲಾ ಕಾರ್ಯಕ್ರಮ ಮೊಟಕುಗೊಳಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಆಸ್ಪತ್ರೆಯ ಬಳಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ, ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಭದ್ರತೆ ನೀಡಲಾಗಿದೆ. ಮಳೆ ಹಿನ್ನೆಲೆ ಸಿಟಿ ರೌಂಡ್ಸ್ನಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೆಲವೇ ನಿಮಿಷಗಳಲ್ಲಿ ಆಗಮಿಸಲಿದ್ದಾರೆ.

ರಾಮಯ್ಯ ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಭೇಟಿ ಬಳಿಕ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಪಾರ್ಥಿವ ಶರೀರ ಶಿಫ್ಟ್ ಮಾಡಲಾಗುತ್ತೆ. ಬೆಳಗ್ಗೆ 9 ಗಂಟೆಗೆ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಬೆಂಗಳೂರು ನಿವಾಸದಿಂದ ಬೆಳಗಾವಿ ಏರ್ಪೋರ್ಟ್ಗೆ ರವಾನಿಸಿ ಅಲ್ಲಿಂದ ತಿಲಕವಾಡಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತೆ. ತಿಲಕವಾಡಿಯ ಶಿವಬಸವನಗರದ ನಿವಾಸದಲ್ಲಿ ಅಂತಿಮ ದರ್ಶನ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.
ಹಾಲಿ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದ ಕತ್ತಿ, 1985ರಲ್ಲಿ ತಂದೆ ವಿಶ್ವನಾಥ್ ನಿಧನ ಬಳಿಕ ರಾಜಕೀಯ ಪ್ರವೇಶ ಮಾಡಿದ್ದರು. ಅಲ್ಲದೆ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕುರಿತ ಹೇಳಿಕೆ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ಆದ್ರೆ ರಾತ್ರಿ 10. 30ಕ್ಕೆ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಎದೆನೋವು ಕಾಣಿಸಿಕೊಂಡಿದ್ದು ಬಾತ್ರೂಮ್ನಲ್ಲಿ ಕುಸಿದುಬಿದ್ದಿದ್ದರು. ತಕ್ಷಣವೇ ಕುಟುಂಬಸ್ಥರು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಉಮೇಶ್ ಕತ್ತಿ ಸಹೋದರ ಮಾಜಿ ಸಂಸದ ರಮೇಶ್ ಕತ್ತಿ, ಮತ್ತು ಕುಟುಂಬಸ್ಥರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.