

ಜಿನೀವಾ/ಬೀಜಿಂಗ್: ಚೀನದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಉಯ್‌ಘರ್ ಮುಸ್ಲಿಂ ಸಮುದಾಯದ ವಿರುದ್ಧ ಚೀನ ಅನ್ಯಾಯ ಎಸಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ವರದಿಯಲ್ಲಿ ಆರೋಪಿಸಲಾಗಿದೆ. ಆ ಸಮುದಾಯದ ಮುಸ್ಲಿಮರನ್ನು ವಿಚಾರಣೆ ಇಲ್ಲದೆ ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಇದು ಮಾನವ ತೆಯ ಮೇಲಿನ ಕ್ರೌರ್ಯ ಎಂದು ಚೀನ ವಿರುದ್ಧ ಕಟು ಶಬ್ದಗಳಿಂದ ಟೀಕಿಸಲಾಗಿದೆ.
ಪಾಕಿಸ್ಥಾನದ ಜತೆಗೆ ಸೇರಿ ಭಾರತದ ವಿರುದ್ಧ ಮಸಲತ್ತು ನಡೆಸುತ್ತಿರುವಂತೆಯೇ ವಿಶ್ವಸಂಸ್ಥೆಯ ಮಟ್ಟದಲ್ಲಿ ಆ ದೇಶದ ಅಸಲಿಯತ್ತು ಬಹಿರಂಗವಾಗಿದೆ. ಚೀನ ಸರಕಾರ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಧ್ವನಿ ಎತ್ತಬೇಕು ಎಂದು ಕರೆ ನೀಡಲಾಗಿದೆ. ಗಮನಾರ್ಹ ಅಂಶವೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತರುವ ವರದಿಯನ್ನು ಬಿಡುಗಡೆ ಮಾಡ ದಂತೆ ಚೀನ ಒತ್ತಡ ಹೇರಿದ್ದೂ ಈಗ ಬಯಲಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಆಯುಕ್ತ ಮೈಕೆಲ್ ಬ್ಯಾಚೆಲೆ ಅವರ ನಾಲ್ಕು ವರ್ಷಗಳ ಅಧಿ ಕಾರದ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಈ ವರದಿ ಬಿಡುಗಡೆಯಾಗಿದೆ.

ಅಮೆರಿಕ ಪ್ರಾಯೋಜಿತ: ವರದಿಯಲ್ಲಿ ಆರೋಪಿಸಲಾಗಿರುವ ಅಂಶಗಳು ಕಟ್ಟುಕತೆ ಎಂದು ಚೀನ ಟೀಕಿಸಿದೆ. ಇದು ಅಮೆರಿಕ ಪ್ರಾಯೋಜಿತ ವಿಶ್ವಸಂಸ್ಥೆಯ ವರದಿ ಎಂದು ಜಿನೀವಾದಲ್ಲಿರುವ ಚೀನದ ಪ್ರತಿನಿಧಿ ಟೀಕಿಸಿದ್ದಾರೆ