

ಬುಧವಾರ ಬಿಹಾರಕ್ಕೆ ಭೇಟಿ ನೀಡಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್(ಕೆಸಿಆರ್) ಅವರು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿ ‘ಬಿಜೆಪಿ-ಮುಕ್ತ ಭಾರತ’ ಕ್ಕೆ ಕರೆ ನೀಡಿದ್ದಾರೆ.
ಇಬ್ಬರು ನಾಯಕರ ಭೇಟಿಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೆಲಂಗಾಣ ಸಿಎಂ ಕೆಸಿಆರ್, ದೇಶವನ್ನು ಕಾಡುತ್ತಿರುವ ಅನೇಕ ಅನಾಹುತಗಳಿಗೆ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೂಪಾಯಿ ಮೌಲ್ಯ ಕುಸಿತ, ರೈತರ ಪ್ರತಿಭಟನೆ, ನಿರುದ್ಯೋಗ ಮತ್ತು ಬೆಲೆ ಏರಿಕೆಗೆ ನರೇಂದ್ರ ಮೋದಿ ಸರ್ಕಾರವೆ ಕಾರಣ ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ವಿರುದ್ಧ ತೃತೀಯ ರಂಗದ ವಿಚಾರವಾಗಿ ಕೆಸಿಆರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಮಡಿದ ಬಿಹಾರದ ಐವರು ಸೈನಿಕರ ಸಂಬಂಧಿಕರಿಗೆ ತಲಾ 10 ಲಕ್ಷ ರೂಪಾಯಿ ಚೆಕ್‌ಗಳನ್ನು ಹಸ್ತಾಂತರಿಸುವುದು ಕೆಸಿಆರ್ ಅವರ ಪಾಟ್ನಾ ಭೇಟಿಯ ಅಧಿಕೃತ ಉದ್ದೇಶವಾಗಿತ್ತು.
ಸಿಎಂ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಸಿಆರ್, ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣ ನೀತಿಗಳ ಮೇಲೆ ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಬಿಜೆಪಿ-ಮುಕ್ತ ಭಾರತ’ಕ್ಕೆ ಕರೆ ನೀಡಿದ್ದಾರೆ.
ಸಾಧ್ಯವಿರುವ ಯಾವುದೇ ವಿಧಾನದಿಂದ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲು ನಾವು ಪ್ರಯತ್ನಿಸಬೇಕು ಎಂದು ಕೆಸಿಆರ್ ಹೇಳಿದ್ದಾರೆ.
ಪಾಟ್ನಾದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಕೆಸಿಆರ್ ಭೇಟಿ ಮಾಡಿದ್ದಾರೆ. 2024 ರಲ್ಲಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಸವಾಲಾಗುತ್ತಾರೆಯೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಸಿಆರ್, “ನಿತೀಶ್ ಅವರು ದೇಶದ ಅತ್ಯುತ್ತಮ ಮತ್ತು ಹಿರಿಯ ನಾಯಕರಲ್ಲಿ ಒಬ್ಬರು. ಈ ಬಗ್ಗೆ ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಕೂತು ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಪಾಟ್ನಾ ಸಭೆಯ ಸಂದರ್ಭದಲ್ಲಿ, ಕೆಸಿಆರ್ ಮತ್ತು ನಿತೀಶ್ ಕುಮಾರ್ ಇಬ್ಬರೂ ಬಿಜೆಪಿಗೆ ಪರ್ಯಾಯವಾಗಿ ಮುಖ್ಯ ವಿರೋಧ ಪಕ್ಷದ ರಂಗ (ಕಾಂಗ್ರೆಸ್ ಇಲ್ಲದೆ)ವಾಗಿ ಇರುತ್ತೇವೆ, ಇದು ತೃತೀಯ ರಂಗವಲ್ಲ ಎಂದು ಹೇಳಿದ್ದಾರೆ. “ತನ್ನ ಸಣ್ಣ ರಾಜಕೀಯ ಲಾಭಕ್ಕಾಗಿ ಕೋಮು ಭಾವನೆಗಳನ್ನು ಪ್ರಚೋದಿಸಿ ಅಪಾಯಕಾರಿ ಆಟವಾಡುತ್ತಿರುವ ಬಿಜೆಪಿ ವಿರುದ್ಧ ನಮ್ಮದು ತೃತೀಯ ರಂಗವಲ್ಲ, ಪ್ರಮುಖ ರಂಗವಾಗಿದೆ” ಎಂದು ಕೆಸಿಆರ್ ಹೇಳಿದ್ದಾರೆ.