

ಕೊಚ್ಚಿ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿ ವೇಗವಾಗಿದೆ, ಕೇರಳದಲ್ಲೂ (Kerala) ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಇಲ್ಲಿಯೂ ಡಬಲ್ ಎಂಜಿನ್ ಸರ್ಕಾರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಎರಡು ದಿನಗಳ ಕೇರಳ ಪ್ರವಾಸಕ್ಕಾಗಿ ಕೊಚ್ಚಿಗೆ ಆಗಮಿಸಿರುವ ಪ್ರಧಾನಿ, ನೆಡುಂಬಶ್ಶೇರಿ ವಿಮಾನ ನಿಲ್ದಾಣದ ಪರಿಸರದಲ್ಲಿ ಬಿಜೆಪಿಯ ಸಭೆಯನ್ನುದ್ದೇಶಿ ಮಾತನಾಡುತ್ತಿದ್ದರು. ಮಲಯಾಳಂನಲ್ಲಿ ಭಾಷಣ ಆರಂಭಿಸಿದ ಮೋದಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಓಣಂ ಹಬ್ಬದ ಸಂದರ್ಭದಲ್ಲಿ ಇಲ್ಲಿ ಬರಲು ಸಾಧ್ಯವಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಶುಭ ಹಾರೈಕೆಗಳು. ಕೇರಳ ಒಂದು ಸುಂದರ ದೇಶ. ಕೇರಳವು ಸಾಂಸ್ಕೃತಿಕ ಸೌಂದರ್ಯ ಮತ್ತು ನೈಸರ್ಗಿಕ ಸೌಂದರ್ಯದಿಂದ ಆಶೀರ್ವದಿಸಿದ ನಾಡು. ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಕೇರಳದಲ್ಲಿ ಒಂದು ಲಕ್ಷ ಕೋಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಬಡವರ ಮತ್ತು ದಲಿತರ ಅಭ್ಯುದಯವೇ ಗುರಿ. ಕೇರಳದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಯೋಜನೆಯಡಿ ಎರಡು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ. ಈಗಾಗಲೇ ಒಂದು ಲಕ್ಷ ಮನೆಗಳು ಪೂರ್ಣಗೊಂಡಿವೆ.

ಕೇರಳದಲ್ಲಿ ಮೋದಿ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದು ಕೊಚ್ಚಿ ಮೆಟ್ರೋ ಮತ್ತು ದಕ್ಷಿಣ ರೈಲ್ವೆಯ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ. ಬಿಜೆಪಿಯ ಕಾರ್ಯಕ್ರಮದ ನಂತರ ಸಂಜೆ ನೆಡುಂಬಶ್ಶೇರಿ ಸಿಯಾಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮೋದಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.