

ಬೆಳಗಾವಿ: ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ(Aam Aadmi Party) ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್(Bhaskar Rao), ಪ್ರಧಾನಿ ನರೇಂದ್ರ ನೋದಿ(Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಲು ಪ್ರಧಾನಿ ಮೋದಿ ಹೆದರುತ್ತಾರೆ. ಬಿಟ್‌ಕಾಯಿನ್ ಫಲಾನುಭವಿಗಳು ಈ ಸರ್ಕಾರ ನಡೆಸುತ್ತಿದ್ದಾರೆ. ಬಿಟ್‌ಕಾಯಿನ್ ಹಗರಣ ಅಂತಾರಾಷ್ಟ್ರೀಯ ಹಗರಣ. ಈ ಹಗರಣ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಸುಮ್ಮನಿದ್ದಾರೆ. ಕೇಸರಿ ಸರ್ಕಾರ ಎನ್ನೋರು ಕೇಸರೀಕರಣ ಮಾಡೋಕೂ ಧೈರ್ಯ ಇಲ್ಲ ಎಂದು ವ್ಯಂಗ್ಯ ವಾಗಿದ್ದಾರೆ.
ಇವರೆಲ್ಲ ಸೋಷಿಯಲ್ ಮಿಡಿಯಾ ಪೈಲ್ವಾನರು. ಸೋಷಿಯಲ್ ಮಿಡಿಯಾದಲ್ಲಿ ಗೂಂಡಾಗಳನ್ನು ಸೃಷ್ಟಿ ಮಾಡಿದ್ದಾರೆ. ಲೋಕಾಯುಕ್ತ ಬಗ್ಗೆ ಇವರು ನೀಡಿದ ವಾದ ವಿಫಲವಾಯಿತು. ಎಸಿಬಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆಗಿಲ್ಲ. ಕಳೆದ 20 ದಿನಗಳಿಂದ ಭ್ರಷ್ಟಾಚಾರ ಬಗ್ಗೆ ಯಾವುದೇ ತನಿಖೆ ಆಗಿಲ್ಲ. ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಭಾಷಣ ಮಾಡ್ತಾರೆ. ಮನೀಷ್ ಸಿಸೋಡಿಯಾ ಮನೆ ಮೇಲೆ ದಾಳಿ ಮಾಡಿದಾಗ ಏನು ಸಿಕ್ತು ತೋರಿಸಿ. ರಾಜ್ಯದಲ್ಲಿ 50ರಷ್ಟು ಕಮಿಷನ್ ಆರೋಪ ಕೇಳಿ ಬಂದಿದೆ. ಸಚಿವ ಮುನಿರತ್ನ ಬಗ್ಗೆ ಸರ್ಕಾರ ಇನ್ನೂ ಕ್ರಮ ವಹಿಸಿಲ್ಲ. ಮಂಗಳೂರಿನ ಕಾರ್ಯಕ್ರಮದಲ್ಲಿ ಈ ಬಗ್ಗೆ ಉತ್ತರ ಕೊಡಬೇಕು. ಬೆಂಗಳೂರಿನಲ್ಲಿ ಅನೇಕ ಮಾಫಿಯಾಗಳು ಸಕ್ರಿಯ ಆಗಿವೆ ಎಂದು ಬೆಳಗಾವಿಯಲ್ಲಿ ಎಎಪಿ ಉಪಾಧ್ಯಕ್ಷ ಭಾಸ್ಕರ್ ರಾವ್ ಆರೋಪಿಸಿದ್ದಾರೆ.

ಸಾವರ್ಕರ್ರನ್ನು ಬೀದಿಗೆ ತಂದು ಬಿಜೆಪಿ ಅವಮಾನ ಮಾಡುತ್ತಿದೆ
ಗಣೇಶೋತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಭಾಸ್ಕರ್ ರಾವ್, ಸಾವರ್ಕರ್ರನ್ನು ಬೀದಿಗೆ ತಂದು ಬಿಜೆಪಿ ಅವಮಾನ ಮಾಡುತ್ತಿದೆ. ಬ್ರಿಟಿಷರು ಅಂಡಮಾನ್ ಜೈಲಿನಲ್ಲಿಟ್ಟಿದ್ದು ಎಲ್ಲರಿಗೂ ಗೊತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಾವರ್ಕರ್ ಜೈಲಿಗೆ ಹೋಗಿದ್ದರು. ಸಾರ್ವಜನಿಕ ಗಣೇಶೋತ್ಸವಕ್ಕೆ ತಿಲಕ್ ಚಾಲನೆ ನೀಡಿದ್ದರು. ಬಾಲಗಂಗಾಧರ ತಿಲಕ್, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡರ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇಡಬೇಕು. ಸಿಕ್ಕ ಸಿಕ್ಕ ಕಡೆ ವಿ.ಡಿ.ಸಾವರ್ಕರ್ ಪೋಸ್ಟರ್ ಅಂಟಿಸುತ್ತಿದ್ದಾರೆ. ಈ ಮೂಲಕ ಕಸದ ತೊಟ್ಟಿಗೆ ಹಾಕುವ ಸ್ಥಿತಿಗೆ ತಲುಪಿದ್ದಾರೆ. ಕಾಂಗ್ರೆಸ್ ಪಕ್ಷದವರು ಸಾವರ್ಕರ್ ಬಗ್ಗೆ ತಿಳಿದುಕೊಳ್ಳಬೇಕು. ಸಾವರ್ಕರ್ ಸ್ವಾತಂತ್ರ್ಯ ಸೇನಾನಿ, ತ್ಯಾಗ ಬಲಿದಾನ ಮಾಡಿದ್ದಾರೆ ಎಂದರು.