


ಮೂಲರಪಟ್ಣ ಜಿ.ಎಚ್.ಎಂ. ಫೌಂಡೇಶನ್ ನಿಂದ ನವೀಕೃತಗೊಂಡ ಎಲ್.ಕೆ.ಜಿ., ಯು.ಕೆ.ಜಿ. ತರಗತಿ ಉದ್ಘಾಟನೆ
ಬಂಟ್ವಾಳ, ಸೆ.1: ಉಚಿತ ಕೊಡುಗೆ ಎಂಬ ಫ್ಯಾಶನ್ ಕೊನೆಗೊಂಡು, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಮಾತ್ರ ಉಚಿತವಾಗಿ ದೇಶದ ಸರ್ವರಿಗೂ ಸಮಾನವಾಗಿ ದೊರೆಯುಂತಾಗಬೇಕು ಎಂಬುದು ನನ್ನ ಆಶಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.
ಜಿ.ಎಚ್.ಎಂ. ಫೌಂಡೇಶನ್ ಇದರ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಮೂಲರಪಟ್ಣ ಆಝಾದ್ ನಗರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಎಲ್.ಕೆ.ಜಿ., ಯು.ಕೆ.ಜಿ. ತರಗತಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
2.35 ಕೋಟಿ ರೂ. ಅನುದಾನದಲ್ಲಿ ಇಲ್ಲಿ ನಾನು ಶಿಲಾನ್ಯಾಸ ಮಾಡಿರುವ ಮೌಲಾನ ಆಝಾದ್ ಶಾಲೆ ಒಂದೆರಡು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಜೆಜೆಎಂ ಯೋಜನೆಯಡಿ 96 ಲಕ್ಷ ರೂ. ಅನುದಾನದಲ್ಲಿ ಅರಳ ಗ್ರಾಮದಲ್ಲಿ ಎರಡು ಕುಡಿಯುವ ನೀರಿನ ಟ್ಯಾಂಕ್ ಗಳು ನಿರ್ಮಾಣವಾಗುತ್ತಿದ್ದು 2024ರ ವೇಳೆಗೆ ಪ್ರತಿಯೊಂದು ಮನೆಗೆ ನಲ್ಲಿ ನೀರು ಲಭ್ಯವಾಗಲಿದೆ ಎಂದರು.

ಮೂಲರಪಟ್ಣದಿಂದ ಬಿ.ಸಿ.ರೋಡ್ ರಸ್ತೆಯ ಅಭಿವೃದ್ದಿಗೆ 4.10 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದ್ದು ಆದಷ್ಟು ಬೇಗ ಬೇಗ ಇಲ್ಲಿನ ರಸ್ತೆ ಸುಸಜ್ಜಿತ ರಸ್ತೆಯಾಗಿ ಮಾರ್ಪಡಲಿದೆ. ಇಲ್ಲಿ ಸೇತುವೆ ಕುಸಿದು ಜನರು ತ್ರೀವ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಮನಗಂಡು ಒಂದು ವರ್ಷದ ಒಳಗೆ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ. ಶಿಕ್ಷಣ, ಆರೋಗ್ಯ, ರಸ್ತೆ, ನೀರು ಸಹಿತ ಈ ಭಾಗದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.
ಹೊಟ್ಟೆ ಪಾಡು ಹಾಗೂ ತಮ್ಮ ಕುಟುಂಬವನ್ನು ಸಾಕಲು ವಿದೇಶದಲ್ಲಿ ದುಡಿಯುವ ಮೂಲರಪಟ್ಣದ ಯುವಕರು ಒಟ್ಟು ಸೇರಿ ಜಿ.ಎಚ್.ಎಂ. ಫೌಂಡೇಶನ್ ಅನ್ನು ರಚಿಸಿ ಅದರ ಮೂಲಕ ತಮ್ಮ ದುಡಿಮೆಯ ಒಂದು ಪಾಲನ್ನು ಬಡವರ ಶಿಕ್ಷಣ, ಆರೋಗ್ಯ, ಮನೆ ನಿರ್ಮಾಣಕ್ಕೆ ವಿನಿಯೋಗಿಸುತ್ತಿರುವುದು ಪುಣ್ಯ ಮತ್ತು ಮಾದರಿ ಕೆಲಸ ಎಂದು ಹೇಳಿದರು.

ಜಿ.ಎಚ್.ಎಂ. ಫೌಂಡೇಶನ್ ಡಾಟಾ ಮತ್ತು ವೆಬ್ ಮುಖ್ಯಸ್ಥ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದೇಶದಲ್ಲಿ ದುಡಿಯುವ ಹಾಗೂ ಈ ಊರಿನ ದಾನಿಗಳ ಸಾಹಕಾರದಿಂದ ಒಂದು ವರ್ಷಕ್ಕೆ ಒಂದು ಮನೆಯಂತೆ ನಾಲ್ಕು ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಪ್ರತಿ ತಿಂಗಳಿಗೆ 15 ಕುಟುಂಬಗಳಿಗೆ ರೇಶನ್ ಕಿಟ್, ಶಾಲೆ, ಕಾಲೇಜಿಗೆ ಅತಿಥಿ ಶಿಕ್ಷಕರ ನೇಮಿಸಿ ಅವರ ವೇತನ, ಪ್ರತಿ ವರ್ಷ ಎರಡು ಬಾರಿ ವೈದ್ಯಕೀಯ, ರಕ್ತದಾನ ಶಿಬಿರ ಹೀಗೆ ಈ ಊರಿನ ಜನರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಸಹಕಾರ ಒತ್ತು ನೀಡಲಾಗುತ್ತಿದೆ ಎಂದರು.
ಗ್ರಾಮದಲ್ಲಿ ಎಜ್ಯುಕೇಶನ್ ಹಬ್ ನಿರ್ಮಿಸುವ ಉದ್ದೇಶವನ್ನು ಜಿ.ಎಚ್.ಎಂ. ಫೌಂಡೇಶನ್ ಹೊಂದಿದ್ದು ಸ್ಮಾರ್ಟ್ ಕ್ಲಾಸ್, ಶಾಲಾ ಬಸ್ ಮೊದಲಾದ ವ್ಯವಸ್ಥೆಯನ್ನು ಮಾಡುವ ಚಿಂತನೆ ನಡೆಯುತ್ತಿದೆ. ಇಲ್ಲಿನ ಸೇತುವೆ ಕುಸಿದು ಬಿದ್ದಾಗ ಸಂಸ್ಥೆಯಿಂದ 9 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ನದಿ ದಾಟಲು ತಾತ್ಕಾಲಿಕ ರಸ್ತೆಯ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆ ಐದು ವರ್ಷಗಳಲ್ಲಿ ಒಂದು ಕೋಟಿ ರೂ. ಅಧಿಕ ಖರ್ಚ ವೆಚ್ಚಗಳನ್ನು ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅರಳ ಗ್ರಾಪಂ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಬಡಗಬೆಳ್ಳೂರು ಗ್ರಾಪಂ ಅಧ್ಯಕ್ಷ ಪ್ರಕಾಶ್ ಆಳ್ವಾ, ಮುತ್ತೂರು ಗ್ರಾಪಂ ಅಧ್ಯಕ್ಷ ಸತೀಶ್ ಬಲ್ಲಾಜೆ, ಕುಪ್ಪೆಪದವು ಗ್ರಾಪಂ ಅಧ್ಯಕ್ಷ ಡಿ.ಪಿ.ಹಮ್ಮಬ್ಬ, ಮುತ್ತೂರು ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ರಘುರಾಮ್ ನಾಯಕ್, ಮೂರಲಪಟ್ಣ ಜುಮಾ ಮಸೀದಿ ಅಧ್ಯಕ್ಷ ಎಂ.ಬಿ.ಅಶ್ರಫ್, ಜಿ.ಎಚ್.ಎಂ. ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಶಾಲಿ, ಸ್ಥಾಪಕ ಅಧ್ಯಕ್ಷ ಹಂಝ ಗುತ್ತು, ಅರಳ ಜುಮಾ ಮಸೀದಿ ಅಧ್ಯಕ್ಷ ಕೆ.ಎಸ್.ಅಶ್ರಫ್, ಮೌಲಾನಾ ಆಝಾದ್ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿತಾ ಕುಮಾರಿ, ಯುವ ಉದ್ಯಮಿಗಳಾದ ಎಸ್.ಲತೀಫ್ ಕಲ್ಲಗುಡ್ಡೆ, ಸಂಶುದ್ದೀನ್ ದುಬೈ, ಉರ್ದು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ಸಲಾಂ, ಸತ್ಯ ಸಾರಾಮಣಿ ಅರ್ಚಕ ಹರಿಯಪ್ಪ, ಪಿ.ಡಬ್ಲ್ಯೂಡಿ ಗುತ್ತಿಗೆದಾರ ಶಾಫಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರತ್ನ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರೇಮಲತಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಸಾಧಕ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಶಾಸಕರು ಸನ್ಮಾನಿಸಿದರು. ಸ.ಉ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಶಮೀನಾ ಅಖ್ತರ್ ಸ್ವಾಗತಿಸಿದರು. ಜಿ.ಎಚ್.ಎಂ. ಟ್ರಸ್ಟಿ ಸಬೀಯುದ್ದೀನ್ ಧನ್ಯವಾದಗೈದರು. ಶಿಕ್ಷಕಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.