

ಚಂಡೀಗಢ: ಸಿಖ್ಖರ ಉನ್ನತ ತಾತ್ಕಾಲಿಕ ಸ್ಥಾನದ ಮುಖ್ಯಸ್ಥ ಅಕಲ್ ತಖ್ತ್ ಜಥೇದಾರ್ ಅವರು ಕ್ರಿಶ್ಚಿಯನ್ ಮಿಷನರಿಗಳು ಬಲವಂತದ ಮತಾಂತರ ಮಾಡಿಸಿರುವುದಾಗಿ ಆರೋಪಿಸಿದ್ದು, ಈ ಹಿನ್ನೆಲೆ ಪಂಜಾಬ್ನ ತರ್ನ್ ತರನ್ ಜಿಲ್ಲೆಯ ಜನರ ಗುಂಪೊಂದು ಮಂಗಳವಾರ ರಾತ್ರಿ ಸ್ಥಳೀಯ ಚರ್ಚ್ಗೆ ನುಗ್ಗಿ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದಾರೆ. ಮಾತ್ರವಲ್ಲದೇ ಚರ್ಚ್ನ ಪಾದ್ರಿಯ ಕಾರಿಗೂ ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.
ಕ್ರೈಸ್ತ ಮಿಷನರಿಗಳು ಸಿಖ್ಖರನ್ನು ಬಲವಂತವಾಗಿ ಮತಾಂತರಿಸುತ್ತಿದ್ದಾರೆ. ಪಂಜಾಬ್ನ ಸಿಖ್ ಮತ್ತು ಹಿಂದೂಗಳನ್ನು ದಾರಿ ತಪ್ಪಿಸಿ ಮತಾಂತರಗೊಳಿಸಲಾಗುತ್ತಿದೆ. ಇದು ಸರ್ಕಾರದ ಕಣ್ಣೆದುರಲ್ಲೇ ನಡೆಯುತ್ತಿದೆ. ಕಾನೂನಿನಲ್ಲಿ ಮೂಢನಂಬಿಕೆ ಆಚರಣೆಗಳನ್ನು ಮಟ್ಟ ಹಾಕುವ ಅವಕಾಶಗಳಿವೆ. ಆದರೆ ವೋಟ್ಬ್ಯಾಂಕ್ ರಾಜಕೀಯದಿಂದಾಗಿ ಯಾವುದೇ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ವಕೀಲ ಗಿಯಾನಿ ಹರ್ಪ್ರೀತ್ ಸಿಂಗ್ ನಿನ್ನೆ ಫೇಸ್ಬುಕ್ ಲೈವ್ ವೀಡಿಯೋದಲ್ಲಿ ತಿಳಿಸಿದ್ದರು.
ಈ ಬೆನ್ನಲ್ಲೇ ಪಂಜಾಬ್ನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿರುವ ಮತಾಂತರ ಪ್ರಯತ್ನಗಳ ವಿರುದ್ಧ ಸಿಖ್ ಮುಖಂಡರು ದನಿಯೆತ್ತಿದ್ದಾರೆ. ನಿನ್ನೆ ರಾತ್ರಿ ತರ್ನ್ ತರನ್ ಜಿಲ್ಲೆಯ ಪಟ್ಟಿ ವಿಧಾನಸಭಾ ಕ್ಷೇತ್ರದ ಥಕರ್ಪುರ ಗ್ರಾಮದಲ್ಲಿ ಚರ್ಚ್ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಸ್ಥಳೀಯ ಚರ್ಚ್ನ ಏಸು ಹಾಗೂ ಮೇರಿಯ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಪಾದ್ರಿಯ ಕಾರಿಗೂ ಬೆಂಕಿ ಹಚ್ಚಲಾಗಿದೆ ಎಂದು ವರದಿಗಳು ತಿಳಿಸಿವೆ.

ಪಂಜಾಬ್ ಗಡಿ ರಾಜ್ಯವಾಗಿದ್ದು, ಮತಾಂತರ ಮಾಡಿಸಲು ಅಲ್ಲಿಗೆ ವಿದೇಶಗಳಿಂದ ಹಣ ಬರುತ್ತದೆ ಎಂಬುದು ನಮಗೆ ತಿಳಿದು ಬಂದಿದೆ. ನಕಲಿ ಪಾದ್ರಿಗಳು ಸಿಖ್ಖರ ದಾರಿ ತಪ್ಪಿಸುತ್ತಿದ್ದಾರೆ ಹಾಗೂ ಮತಾಂತರ ಮಾಡುತ್ತಿದ್ದಾರೆ. ಈ ಕೂಡಲೇ ಇದನ್ನು ನಿಯಂತ್ರಿಸಬೇಕು. ಈ ನಕಲಿ ಪಾದ್ರಿಗಳ ವಿರುದ್ಧ ಮೂಢನಂಬಿಕೆಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಹರ್ಪ್ರೀತ್ ಸಿಂಗ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.