

ಬೆಂಗಳೂರು (ಆ.30): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪಕ್ಷದ ಸಂಘಟನೆ, ಪ್ರವಾಸ, ಜನಸಂಪರ್ಕದ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಲಾಗಿದ್ದು, ರಾಜ್ಯದ ಆರು ಕಡೆ ದೊಡ್ಡ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಮವಾರ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಿಜೆಪಿಯಲ್ಲಿನ ಪ್ರಸ್ತುತ ಬೆಳವಣಿಗೆ ಮತ್ತು ರಾಜ್ಯ ರಾಜಕೀಯ ವಿದ್ಯಮಾನಗಳು ಕುರಿತು ಬೊಮ್ಮಾಯಿ ಚರ್ಚೆ ನಡೆಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ನಾಯಕರಾದ ಯಡಿಯೂರಪ್ಪ ಅವರು ಪಕ್ಷದ ಸಂಘಟನೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದೆಹಲಿಗೆ ಹೋಗಿ ಭೇಟಿಯಾಗಿ ಬಂದಿದ್ದಾರೆ. ಅಲ್ಲಿಯ ಮಾತುಕತೆ, ಸೂಚನೆಯ ಬಗ್ಗೆ ವಿವರವಾಗಿ ಚರ್ಚೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆ.2ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಭೇಟಿ ನೀಡುವ ಸಂದರ್ಭದಲ್ಲಿ ಪಕ್ಷದ ವತಿಯಿಂದ ಮಾಡಬೇಕಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು. ನಾಯಕರಾದ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಅವರು ವಿವಿಧ ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುವ ಕುರಿತು ಚರ್ಚಿಸಲಾಗಿದೆ.
ಮುಂದಿನ ದಿನದಲ್ಲಿ ಮತ್ತೊಂದು ಸಭೆಯನ್ನು ರಾಜ್ಯಮಟ್ಟದ ಹಿರಿಯ ನಾಯಕರೊಂದಿಗೆ ನಡೆಸಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಾರ್ಯಕ್ರಮದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರ್ಣಯವಾಗಿದೆ. ಸೆ.8ರಂದು ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದನ್ನು ಯಶಸ್ವಿಗೊಳಿಸಲು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅದನ್ನು ಕಾರ್ಯಗತ ಮಾಡಲು ಸಂಘಟಕರಿಗೆ ತಿಳಿಸಲಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕರು, ಪದಾಧಿಕಾರಿಗಳು ಎಲ್ಲರೂ ಸೇರಿ ಜನೋತ್ಸವ ಯಶಸ್ವಿ ಮಾಡುತ್ತೇವೆ ಎಂದರು.