
ಕಣಚೂರು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಡಾ.ರವಿವರ್ಮ, ಡಾ.ಗುರುಪ್ರಸಾದ್ ಮತ್ತು ಡಾ.ನಜೀಬ್ ನೇತೃತ್ವದ ತಂಡ ಅಧ್ಯಯನ ನಡೆಸಿ ಬಾಲಕನ ಬಾಯಿಯಲ್ಲಿದ್ದ 18 ಸೆ. ಮೀ ದೊಡ್ಡ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ
ಮಂಗಳೂರು: 17 ವರ್ಷದ ಬಾಲಕನೊಬ್ಬನ ಮೆದುಳಿನಿಂದ ಆರಂಭವಾಗಿ ಬಾಯಿಯೊಳಗೆ ಇಳಿದ ಕ್ಯಾನ್ಸರ್ ಗಡ್ಡೆಯನ್ನು ಮಂಗಳೂರಿನ ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದೆ.
ಆಪರೇಷನ್ ಯಶಸ್ವಿ.. ಆತನನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆತನ ಮುಖದ ಚಿತ್ರಣವೆ ಬದಲಾಗಿತ್ತು. ಮೆದುಳಿನಿಂದ ಬಾಯಿಯೊಳಗೆ ಇಳಿದ 18 ಸೆಂ.ಮೀ ಗಡ್ಡೆ ಆತನ ಬದುಕನ್ನೇ ಕಸಿಯುವಂತಿತ್ತು. ಈವರೆಗೆ ಎಲ್ಲಿಯೂ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆಯೆ ನಡೆಯದ ನಡುವೆ ಮಂಗಳೂರಿನ ಕಣಚೂರು ಆಸ್ಪತ್ರೆ ವೈದ್ಯರ ತಂಡ ಅಪಾಯವನ್ನು ಮುಂದಿಟ್ಟುಕೊಂಡು ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ

ಕೊಪ್ಪದ 17 ವರ್ಷದ ಬಾಲಕನಲ್ಲಿ ಕ್ಯಾನ್ಸರ್ ಗಡ್ಡೆಯೊಂದು ಮೆದುಳಿನಲ್ಲಿ ಬೆಳೆದು ಬಾಯಿಯೊಳಗೆ ಇಳಿದಿತ್ತು. ಬಾಲಕನನ್ನು ದಯನೀಯ ಸ್ಥಿತಿಯಲ್ಲಿ ಆತನ ಹೆತ್ತವರು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದರೂ ಮೆದುಳಿನಿಂದ ಬಂದಿರುವ ಈ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲು ಸಾಧ್ಯವಿಲ್ಲ ಎಂದು ವಾಪಸು ಕಳುಹಿಸಿದ್ದರು.
ಬಾಲಕನಿಗೆ ಹೊಸ ಬದುಕು.. ಕಣಚೂರು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಂಡ ವ್ಯಕ್ತಿಯೊಬ್ಬರು ನೀಡಿದ ಸಲಹೆಯಂತೆ ಬಾಲಕನ ಪೋಷಕರು ಕಣಚೂರು ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ವೈದ್ಯರು ಬಾಲಕನಿಗೆ ಹೊಸ ಜೀವನವನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಣಚೂರು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಡಾ.ರವಿವರ್ಮ, ಡಾ.ಗುರುಪ್ರಸಾದ್ ಮತ್ತು ಡಾ.ನಜೀಬ್ ನೇತೃತ್ವದ ತಂಡ ಅಧ್ಯಯನ ನಡೆಸಿ 18 ಸೆ. ಮೀ ದೊಡ್ಡ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಈ ಅಪಾಯಕಾರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ಬಳಿಕ ಬಾಲಕ ಇದೀಗ ಚೇತರಿಸಿಕೊಂಡಿದ್ದಾನೆ.