

ಉಳ್ಳಾಲ: ಮನೆಯಿಂದ ನಾಪತ್ತೆಯಾಗಿದ್ದ ಶಿಕ್ಷಕಿಯೋರ್ವರು ಬಾವಿಯಲ್ಲಿ ಮೃತದೇಹವಾಗಿ ಪತ್ತೆಯಾದ ಘಟನೆ ಉಳ್ಳಾಲದಲ್ಲಿ ಶುಕ್ರವಾರ ನಡೆದಿದೆ.
ಹರಿಣಾಕ್ಷಿ ಬಸವರಾಜ್ (51)ಮೃತ ದುರ್ದೈವಿ. ಉಳ್ಳಾಲದ ಅಬ್ಬಕ್ಕ ಸರ್ಕಲ್‌ನಲ್ಲಿ ಲಿಟಲ್ ಹಾರ್ಟ್ ಕಿಂಡರ್ ಗಾರ್ಟನ್ ಸಂಸ್ಥೆಯ ಮಾಲಕಿ ಮತ್ತು ಶಿಕ್ಷಕಿಯೂ ಆಗಿರುವ ಹರಿಣಾಕ್ಷಿ ಇಂದು ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದರು. ಮಧ್ಯಾಹ್ನ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಇವರು ಮೃತದೇಹವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯ ಈಜು ರಕ್ಷಕರು ಸೇರಿ ಬಾವಿಯೊಳಗಿದ್ದ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಇನ್ನು ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.