

ಮಂಗಳೂರು: ಪ್ರವೀಣ್ ಕೊಲೆಯ (Praveen Nettar) ಪ್ರಮುಖ ಆರೋಪಿಗಳನ್ನು ಬೆಳಗ್ಗೆ 7 ಗಂಟೆಗೆ ತಲಪಾಡಿ ಚೆಕ್ಪೋಸ್ಟ್ ಬಳಿ ಬಂಧಿಸಿದ್ದೇವೆ ಎಂದು ನಗರದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆರೋಪಿಗಳಿಗೆ ಆಶ್ರಯ ನೀಡಿದ್ದವರನ್ನು ವಿಚಾರಣೆ ನಡೆಸುತ್ತೇವೆ. ಆರೋಪಿಗಳು ಯಾವ ಕಾರಣಕ್ಕಾಗಿ ಪ್ರವೀಣ್ ಹತ್ಯೆ ಮಾಡಿದ್ದಾರೆಂದು ಕೂಲಂಕಷವಾಗಿ ವಿಚಾರಣೆ ನಡೆಸುತ್ತೇವೆ. ಬಂಧಿತ ಶಿಯಾಬುದ್ದೀನ್ ಅಲಿಯಾಸ್ ಶಿಯಾಬ್ ಸುಳ್ಯ ನಿವಾಸಿ. ಪ್ರವೀಣ್ ಹತ್ಯೆಗೆ 4 ಬೈಕ್, 1 ಕಾರನ್ನು ಆರೋಪಿಗಳು ಬಳಕೆ ಮಾಡಿದ್ದಾರೆ ಎಂದು ಹೇಳಿದರು.
ಪ್ರಕರಣದ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಇಂದು ಬೆಳಗ್ಗೆ ಮಂಗಳೂರಿನ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ. ಸುಳ್ಯದ ಶಿಯಾಬ್ (33), ಅಂಕತಡ್ಕದ ರಿಯಾಝ್ (27) ಸುಳ್ಯದ ಎಲಿಮಲೆ ನಿವಾಸಿ ಬಶೀರ್ನನ್ನು ಬಂಧಿಸಿದ್ದೇವೆ. ಶಿಯಾಬ್ ಕ್ಯಾಂಪ್ಕೋ ಕಂಪನಿಗೆ ಕೊಕ್ಕೊ ವಿತರಣೆ ಮಾಡುತ್ತಿದ್ದರೆ ರಿಯಾಝ್ ಕೋಳಿ ವ್ಯಾಪಾರ ಮಾಡುತ್ತಿದ್ದ. ಬಶೀರ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ. ಕೃತ್ಯಕ್ಕೆ ಬ್ಲ್ಯಾಕ್ ಸ್ಪ್ಲೆಂಡರ್ ಬೈಕನ್ನು ಬಳಕೆ ಮಾಡಲಾಗಿದೆ. ಕಾರೊಂದನ್ನು ಸಹ ಬಳಕೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಸಹ ವಶಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
.

ಆರೋಪಿಗಳ ಬಗ್ಗೆ ಮೊದಲೇ ನಮಗೆ ಸುಳಿವು ಸಿಕ್ಕಿತ್ತು. ಆದರೆ ನಾವು ಬಹಿರಂಗ ಮಾಡಿರಲಿಲ್ಲ. ಮುಂದೆ ಈ ರೀತಿಯ ಯಾವುದೇ ಕೃತ್ಯ ನಡೆಯದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವಾರೆಂಟ್ ಇಶ್ಯೂ ಮಾಡಿ ಹಂತಕರು ಮತ್ತು ಹಂತಕರಿಗೆ ಸಹಕಾರ ನೀಡಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕುತ್ತೇವೆ. ಯಾವುದೇ ಅಮಾಯಕರನ್ನು ಬಂಧನ ಮಾಡುವುದಿಲ್ಲ. ಆದರೆ ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸುತ್ತೇವೆ. ಯಾರನ್ನು ಫಿಕ್ಸ್ ಮಾಡುವುದಕ್ಕೆ ಹೋಗುವುದಿಲ್ಲ. ಯಾರನ್ನೋ ಬಂಧಿಸುವುದಕ್ಕೆ ಇದು ಹುಡುಗಾಟವಲ್ಲ. ನಮಗೆ ಜಾತಿ, ಧರ್ಮ, ಬಣ್ಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲ ಮಾಹಿತಿಯನ್ನು ನಾವು ಎನ್ಐಎಗೆ ನೀಡುತ್ತೇವೆ. ಎನ್ಐಎ ಕೂಡಾ ತನಿಖೆ ಮುಂದುವರಿಸುತ್ತಿದೆ. ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಶತಾಯಗತಾಯವಾಗಿ ಈ ಪ್ರಕರಣ ಭೇದಿಸಬೇಕಾಗಿತ್ತು. ಜನರಲ್ಲಿಯೂ ಸಾಕಷ್ಟು ಆತಂಕವಿತ್ತು. ಪ್ರಕರಣ ಭೇದಿಸಲು ಸಾಕಷ್ಟು ಒತ್ತಡಗಳಿತ್ತು. ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅಧಿಕಾರಿ ತಂಡಕ್ಕೆ ಬಹುಮಾನವೂ ಘೋಷಿಸಲಾಗುತ್ತದೆ ಎಂದು ತಿಳಿಸಿದರು.