
ಮಂಗಳೂರು: ರಾಷ್ಟ್ರ ಧ್ವಜಕ್ಕೆ ಪಾಲಿಸ್ಟರ್ ಬಟ್ಟೆ ಬಳಕೆಯು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ. ರಾಷ್ಟ್ರಧ್ವಜವು ಮಹಾತ್ಮ ಗಾಂಧಿಜೀ ಅವರ ಹೋರಾಟದ ಹಾಗೂ ಸ್ವರಾಜ್ ಮತ್ತು ಸ್ವದೇಶಿ ಹೋರಾಟದ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಸರ್ಕಾರ ಬಂದರೂ ಖಾದಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿತ್ತು. ವಿಶ್ವದೆಲ್ಲೆಡೆ ಖಾದಿ ಬಟ್ಟೆಗೆ ಗೌರವ ನೀಡಲಾಗುತ್ತಿದೆ. ಆದರೆ ನಮ್ಮಲ್ಲಿ ಅದರ ಮಹತ್ವ ಕಡಿಮೆಯಾಗಿದೆ. 75ರ ಸಂಭ್ರಮಕ್ಕೆ ಎಲ್ಲರಿಗೂ ಖಾದಿ ಧರಿಸುವಂತೆ ಕರೆ ನೀಡಬೇಕಿತ್ತು. ಆದರೆ ರಾಷ್ಟ್ರ ಧ್ವಜವನ್ನೇ ಪಾಲಿಸ್ಟರ್ ಬಟ್ಟೆಗೆ ಬದಲಾಯಿಸಲಾಗಿದೆ. ಮಾತಾಡೋದು ಸ್ವದೇಶಿ ಆದರೆ ಕೆಲಸ ಮಾಡುವಾಗ ಎಲ್ಲಾ ವಿದೇಶಿ ಎಂದು ಕಿಡಿಕಾರಿದ್ದಾರೆ.
ವಿದೇಶದಿಂದ ಆಮದು ಮಾಡಿದ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜ ತಯಾರಿಸಲಾಗುತ್ತಿದೆ. ಚೈನಾದಿಂದಲೂ ಬಟ್ಟೆ ಆಮದಿಗೆ ಅವಕಾಶ ನೀಡಲಾಗಿದ್ದು, ಇದು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತದೆ. ಚೈನಾವನ್ನು ದೂರಿ ಈಗ ಅಲ್ಲಿಂದಲೇ ರಾಷ್ಟ್ರ ಧ್ವಜಕ್ಕೆ ಬಟ್ಟೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಬಿಜೆಪಿ ಸರ್ಕಾರ ದೇಶಕ್ಕೆ ಮಾಡಿದ ಅವಮಾನ. ಸರ್ಕಾರ ಈ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಿ ಖಾದಿಗೆ ಮಹತ್ವ ನೀಡಬೇಕೆಂದು ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
