

ಪಾಟ್ನಾ: ಒಂದೆಡೆ ಮಹಾರಾಷ್ಟ್ರದಲ್ಲಿ (Maharashtra Politics) ಕಾಂಗ್ರೆಸ್ ಜೊತೆಗಿನ ಶಿವಸೇನೆಯ ಮೈತ್ರಿಯನ್ನು ಒಡೆದು ಹೊಸ ಸರ್ಕಾರ ರಚಿಸಿರುವ ಬಿಜೆಪಿಗೆ ಬಿಹಾರದಲ್ಲಿ (Bihar) ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನೆ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಿಹಾರದಲ್ಲಿ ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರ ಪತನವಾಗುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ದೂರ ಸರಿಯಲು ನಿರ್ಧರಿಸಿರುವ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ವಿಪಕ್ಷಗಳ ಜೊತೆ ಸೇರಿ ಮಹಾಘಟಬಂಧನ್ ರಚನೆ ಮಾಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ತೇಜಸ್ವಿ ಯಾದವ್ (Tejaswi Yadav) ಅವರೊಂದಿಗೆ ರಾಜ್ಯಪಾಲರ ಭೇಟಿಗೆ ನಿತೀಶ್ ಕುಮಾರ್ (Nitish Kumar) ಸಮಯಾವಕಾಶ ಕೇಳಿರುವುದರಿಂದ ಈ ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.
ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಹೀಗಾಗಿ, ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳಲು ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮತ್ತು ಇತರ ಮಹಾಘಟಬಂಧನ್ ಘಟಕಗಳು ಇಂದು ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ. ಅಲ್ಲದೆ, ಅವರು ತೇಜಸ್ವಿ ಯಾದವ್ ಅವರೊಂದಿಗೆ ರಾಜಭವನಕ್ಕೆ ತೆರಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಒಂದುವೇಳೆ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡರೆ ಅವರಿಗೆ ನಮ್ಮ ಬೆಂಬಲವಿದೆ ಎಂದು ಬಿಹಾರದ ಏಕೈಕ ದೊಡ್ಡ ಪಕ್ಷವಾಗಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ತೇಜಸ್ವಿ ಯಾದವ್ ಹೇಳಿದ್ದರು. ಬಿಹಾರದಲ್ಲಿ ಮಹಾರಾಷ್ಟ್ರ ಮಾದರಿಯನ್ನು ಪುನರಾವರ್ತಿಸಲು ಅಮಿತ್ ಶಾ ಬಯಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.


