
ಮಂಗಳೂರು ದಕ್ಷಿಣ ಕನ್ನಡ
ಹೊಳೆ ನೀರಲ್ಲಿ ಬಿದ್ದ ಶರೀಫ್ ರನ್ನು ರಕ್ಷಣೆ ಮಾಡಿದ ಸೋಮಶೇಖರ್
ಜೀವ ಕಾಪಾಡಿದ ಸೌಹಾರ್ದತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆ ಜೋರಾಗಿದೆ. ಅದ್ರಲ್ಲೂ ಸುಳ್ಯ, ಕಡಬದಲ್ಲೂ ಮಳೆ ಅಬ್ಬರವಂತೂ ಬಲು ಜೋರಾಗಿದೆ. ಈ ಮಧ್ಯೆ ಸುಳ್ಯದ ಹರಿಹರ ಪಲ್ಲತ್ತಡ್ಕದಲ್ಲಿ ರಾಶಿ ಬಿದ್ದ ಮರದ ದಿಮ್ಮಿಗಳನ್ನು ತೆರವು ಮಾಡುತ್ತಿದ್ದ ಕ್ರೇನ್ ಆಪರೇಟರ್ ಒಬ್ರು ಹೊಳೆಯ ಪಕ್ಕದಲ್ಲಿ ನಿಂತಿದ್ದ ವೇಳೆ ನೀರಿಗೆ ಬಿದ್ದ ಘಟನೆ ನಡೆದಿತ್ತು. ಈ ವೇಳೆ ಯುವಕನೋರ್ವ ನದಿಗೆ ಹಾರಿ ಅವರನ್ನು ರಕ್ಷಿಸಿದ ಮಾನವೀಯ ಘಟನೆ ನಡೆದಿದೆ.
ಹೌದು. ಪಂಜ ಸಮೀಪದ ಪಡ್ಪಿನಂಗಡಿ ನಿವಾಸಿ ಶರೀಫ್ ಎಂಬುವವರ ಕ್ರೇನ್ ಹಾಗೂ ಸ್ಥಳೀಯ ನಿವಾಸಿಯ ಜೆಸಿಬಿ ವಾಹನಗಳನ್ನು ತರಿಸಲಾಗಿತ್ತು. ಕಾರ್ಯಾಚರಣೆಯ ವೇಳೆ ಆಪರೇಟರ್ ಶರೀಫ್ ಕ್ರೇನ್ ನಿಂದ ಇಳಿದು ಹೊಳೆ ಪಕ್ಕದಲ್ಲಿ ನಿಂತಿದ್ದಾಗ ಮರದ ದಿಮ್ಮಿಯೊಂದು ತಾಗಿದ ಪರಿಣಾಮ ಹರಿಯುತ್ತಿರುವ ನೀರಿಗೆ ಬಿದ್ದಿದ್ದರು.
ಈ ವೇಳೆ ಹರಿಹರ ನಿವಾಸಿ ಸೋಮಶೇಖರ್ ಕಟ್ಟೆಮನೆ ಎಂಬುವವರು ಪ್ರಾಣಾಪಾಯವನ್ನು ಲೆಕ್ಕಿಸದೇ ಹೊಳೆಗೆ ಜಿಗಿದು ಶರೀಫ್ ರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಊರಿನ ಇತರರು ಸೇರಿ ಶರೀಫ್ ರನ್ನು ಮೇಲಕ್ಕೆತ್ತಿ ಜೀವವನ್ನು ಉಳಿಸಿದ್ದಾರೆ.
