
ಮಂಗಳೂರು ದಕ್ಷಿಣ ಕನ್ನಡ
ದ.ಕ. ಜಿಲ್ಲೆಯಲ್ಲಿ ಇಂದು ಸಂಜೆಯಿಂದ ಆಗಸ್ಟ್ 1ರವರೆಗೆ ಸಂಜೆ 6ಕ್ಕೆ ಅಂಗಡಿಗಳನ್ನು ಮುಚ್ಚಲು ಆದೇಶ
ಇಂದು ಅಂದ್ರೆ ಶುಕ್ರವಾರ ಸಂಜೆಯಿಂದ ಆಗಸ್ಟ್ 1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ಸೇವೆಯನ್ನು ಹೊರತುಪಡಿಸಿ ಎಲ್ಲ ಅಂಗಡಿಮುಂಗಟ್ಟುಗಳನ್ನು ಸಂಜೆ 6 ಗಂಟೆಗೆ ಮುಚ್ಚುವಂತೆ ಜಿಲ್ಲಾಧಿಕಾರಿರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳು, ಆಸ್ಪತ್ರೆ ಹಾಗೂ ಮೆಡಿಕಲ್ ಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಆಗಸ್ಟ್ 1ರವರೆಗೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ತೆರೆಯಲು ಅವಕಾಶ ಇರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳು ಅಂಗಡಿಗಳ ಮೇಲೆ ನಿಗಾ ಇರಿಸಬೇಕು. ಜನತೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆಯೊಂದಿಗೆ ಸಹಕರಿಸಬೇಕು. ಆಸ್ಪತ್ರೆ, ಮೆಡಿಕಲ್ ಸೇರಿದಂತೆ ತುರ್ತು ಸೇವೆಗಳಿಗೆ ಈ ಆದೇಶ ಆನ್ವಯಿಸುವುದಿಲ್ಲ ಎಂದವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.