
ಆಸ್ಟ್ರೇಲಿಯಾದಲ್ಲಿ ತೇಜಸ್ವಿ ಸೂರ್ಯ ಭಾಷಣಕ್ಕೆ ತೀವ್ರ ವಿರೋಧ; ಪ್ರತಿಭಟನೆ ಬಳಿಕ ಕಾರ್ಯಕ್ರಮ ರದ್ದು
ಸ್ತ್ರೀವಿರೋಧಿ ಧೋರಣೆಯ ಫ್ಯಾಸಿಸ್ಟ್ ಸಂಸದನನ್ನು ಆಸ್ಟ್ರೇಲಿಯಾಕ್ಕೆ ಆಹ್ವಾನಿಸಬಾರದು ಎಂಬ ಆಕ್ರೋಶ ವ್ಯಕ್ತವಾಗಿದೆ.
ವಿವಾದಗಳ ಮೂಲಕ ಹೆಸರಾಗಿರುವ ಸಂಸದ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಆಸ್ಟ್ರೇಲಿಯಾದಲ್ಲಿ ಕಹಿ ಅನುಭವವಾಗಿದೆ. ಅಲ್ಲಿ ಆಯೋಜಿಸಲಾಗಿದ್ದ ಭಾಷಣವನ್ನು ರದ್ದುಗೊಳಿಸಲಾಗಿದೆ.
ತೇಜಸ್ವಿ ಸೂರ್ಯ ಅವರು ಸೋಮವಾರ ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಪ್ರತಿಭಟನೆಯ ಸೂಚನೆಗಳ ನಂತರ ಸಂಘಟಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
ಆಸ್ಟ್ರೇಲಿಯಾ-ಭಾರತ ಯುವ ಸಂವಾದ (ಎಐವೈಡಿ) ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ತೇಜಸ್ವಿ ಸೂರ್ಯ ಅವರು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.
“ಇದು ಭಾರತ ಮತ್ತು ಆಸ್ಟ್ರೇಲಿಯಾದ ಯುವಕರ ನಡುವಿನ ಸಂವಾದದ ವೇದಿಕೆಯಾಗಿದೆ. ಪ್ರತಿ ವರ್ಷ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಎರಡೂ ದೇಶಗಳಿಂದ ಆಯ್ದ 15 ಯುವಕರು ಪಾಲ್ಗೊಳ್ಳುತ್ತಾರೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಯುವಕರು ಪರಸ್ಪರ ಸಂವಾದ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ” ಎಂದು ಎಐವೈಡಿ ವೆಬ್‌ಸೈಟ್ ಹೇಳುತ್ತದೆ.
ಈ ವರ್ಷ ಮೇ 31ರಿಂದ ಜೂನ್ 3 ರವರೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಭಾರತದಿಂದ ಆಯ್ಕೆಯಾದ 15 ಜನರಲ್ಲಿ ತೇಜಸ್ವಿ ಸೂರ್ಯ ಕೂಡ ಇದ್ದರು. ಅವರು ಸೋಮವಾರ ಸಿಡ್ನಿಯ ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದರು ಎಂದು ‘The Newz India’ ವೆಬ್‌ಸೈಟ್ ವರದಿ ಮಾಡಿದೆ.
ಆಸ್ಟ್ರೇಲಿಯಾದಲ್ಲಿ ತೇಜಸ್ವಿ ಸೂರ್ಯರ ಕಾರ್ಯಕ್ರಮ ರದ್ದು
ತೇಜಸ್ವಿ ಸೂರ್ಯ ಅವರು ಕಾರ್ಯಕ್ರಮಕ್ಕೆ ಬರಬಾರದೆಂದು ಆಗ್ರಹಿಸಿ ಹಲವು ಸಂಘಟನೆಗಳು ಮತ್ತು ಶೈಕ್ಷಣಿಕ ಕ್ಷೇತ್ರದ ತಜ್ಞರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಪ್ರತಿಭಟನೆ ನಡೆಸಿದ್ದರು. ಕೆಲವು ಸಂಘಟನೆಗಳು ವಿಶ್ವವಿದ್ಯಾನಿಲಯಕ್ಕೆ ಪ್ರತಿಭಟನೆಯ ನೋಟಿಸ್ ಸಹ ಕಳುಹಿಸಿದ್ದವು. ಈ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯವು ಪ್ರತಿಭಟನಾಕಾರರಿಗೆ ಇಮೇಲ್ ಮೂಲಕ ತಿಳಿಸಿದೆ.
ತನ್ನ ಪ್ರತಿಕ್ರಿಯೆಯಲ್ಲಿ ವಿವಿಯು, “ಈ ಕಾರ್ಯಕ್ರಮವನ್ನು ಸ್ವಿನ್‌ಬರ್ನ್ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗಿಲ್ಲ. ಆದರೆ ವಿಶ್ವವಿದ್ಯಾಲಯದ ಕ್ಯಾಂಪಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಖಾಸಗಿ ಸಂಸ್ಥೆಯಾದ ಎಜುಕೇಶನ್ ಸೆಂಟರ್ ಆಫ್ ಆಸ್ಟ್ರೇಲಿಯಾ (ECA) ಕಾರ್ಯಕ್ರಮ ಹಮ್ಮಿಕೊಂಡಿದೆ. ಇಸಿಎ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.
ಫ್ಯಾಸಿಸ್ಟ್, ಹಿಂದುತ್ವವಾದಿ, ಸ್ತ್ರೀವಿರೋಧಿ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಆಸ್ಟ್ರೇಲಿಯಾಕ್ಕೆ ಆಗಮಿಸಬಾರದೆಂದು ಪ್ರತಿಭಟನೆಗಳು ಆರಂಭವಾಗಿದ್ದವು. ಆತ ಎಐವಿಡಿ ಸಮ್ಮೇಳನದಲ್ಲಿ ಭಾಗವಹಿಸುವ ಮಾಹಿತಿಯು ಬಹಿರಂಗವಾದಾಗ, ಅವರ ವೀಸಾವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಆನ್‌ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನ ಶುರುವಾಯಿತು. ಇದುವರೆಗೆ 4,000ಕ್ಕೂ ಹೆಚ್ಚು ಜನರು ಇದರಲ್ಲಿ ಸಹಿ ಮಾಡಿದ್ದು, “ಫ್ಯಾಸಿಸ್ಟ್ ಸಂಸದರನ್ನು ಆಸ್ಟ್ರೇಲಿಯಾಕ್ಕೆ ಸರ್ಕಾರಿ ಸಂಸ್ಥೆಗಳ ವೆಚ್ಚದಲ್ಲಿ, ಸರ್ಕಾರಿ ಸಂಸ್ಥೆಗಳ ಹೆಸರಲ್ಲಿ ಕರೆಸುವುದು ಸ್ವೀಕಾರಾರ್ಹವಲ್ಲ” ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ತೇಜಸ್ವಿ ಸೂರ್ಯ ಅವರಿಗೆ ವೇದಿಕೆ ನೀಡದಂತೆ ಎಐವೈಡಿ ಮತ್ತು ಅದರ ಅಂಗ ಸಂಸ್ಥೆಗಳಿಗೆ ಆಸ್ಟ್ರೇಲಿಯಾದ ಹಲವು ಸಂಘಟನೆಗಳು ಸಹ ಜಂಟಿ ಪತ್ರ ಬರೆದಿವೆ. ಆಸ್ಟ್ರೇಲಿಯನ್ ಸಂಸ್ಥೆಗಳಾದ ದಿ ಹ್ಯುಮಾನಿಸಂ ಪ್ರಾಜೆಕ್ಟ್, ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಆಸ್ಟ್ರೇಲಿಯನ್ ಫೆಡರೇಶನ್ ಆಫ್ ಇಸ್ಲಾಮಿಕ್ ಕೌನ್ಸಿಲ್ಸ್, ವಿ ಆರ್ ದಿ ಮೈನ್‌ಸ್ಟ್ರೀಮ್, ಸೌತ್ ಏಷ್ಯನ್ ಹ್ಯೂಮನಿಸ್ಟ್ ಅಸೋಸಿಯೇಷನ್, ನ್ಯೂಜಿಲೆಂಡ್, ಯುಎಸ್ ಮತ್ತು ಯುಕೆಯ ಮಾನವ ಹಕ್ಕುಗಳ ಸಂಘಟನೆಗಳು ಈ ಜಂಟಿ ಪತ್ರದಲ್ಲಿ ಸಹಿ ಮಾಡಿವೆ.
ದಿ ಹ್ಯುಮಾನಿಸಂ ಪ್ರಾಜೆಕ್ಟ್‌ನ ಡಾ. ಹರೂನ್ ಖಾಸಿಮ್ ಪ್ರತಿಕ್ರಿಯಿಸಿ, “ಎಐವೈಡಿ ವೆಬ್‌ಸೈಟ್ ಹೇಳುವಂತೆ ತೇಜಸ್ವಿ ಸೂರ್ಯ ತನ್ನನ್ನು ಆರ್‌ಎಸ್‌ಎಸ್ ಸ್ವಯಂಸೇವಕ ಎಂದು ಪರಿಚಯಿಸಿಕೊಳ್ಳುತ್ತಾರೆ. ಒಬ್ಬರನ್ನೊಬ್ಬರು ಶತ್ರುವನ್ನಾಗಿ ಮಾಡುತ್ತಾರೆ. ಅವರ ತತ್ತ್ವಚಿಂತನೆಗೆ ವೇದಿಕೆ ಕಲ್ಪಿಸುವುದು ಬುದ್ಧಿವಂತಿಕೆಯಲ್ಲ” ಎಂದಿದ್ದಾರೆ.
ಭಾರತೀಯ-ಆಸ್ಟ್ರೇಲಿಯನ್ ಲೇಖಕ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದ ಉಪನ್ಯಾಸಕ ರೊನ್ನಾ ಗೊನ್ಸಾಲ್ವೆಸ್ ಪ್ರತಿಕ್ರಿಯಿಸಿ, “ವಿಶ್ವವಿದ್ಯಾನಿಲಯಗಳು ಮಹಿಳೆಯರನ್ನು ದ್ವೇಷಿಸುವ ಇಂತಹ ಹಿಂದುತ್ವ ಫ್ಯಾಸಿಸ್ಟ್‌ಗಳನ್ನು ಬೆಂಬಲಿಸಬಾರದು” ಎಂದು ಒತ್ತಾಯಿಸಿದ್ದಾರೆ.
“ಉನ್ನತ ಶಿಕ್ಷಣದೊಳಗೆ ಮಹಿಳಾ ವಿರೋಧಿ, ಮಿಲಿಟರಿ ಸಿದ್ಧಾಂತಕ್ಕೆ ವೇದಿಕೆಯನ್ನು ಒದಗಿಸುವುದು ಸರಿಯಲ್ಲ” ಎಂದು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದ ಡಾ.ಸುಖಮಣಿ ಖುರಾನಾ ಅಭಿಪ್ರಾಯಪಟ್ಟಿದ್ದಾರೆ.
