
ಮಂಗಳೂರು, ಅ. 13 : ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಮದುವೆ ಪ್ರಸ್ತಾಪದ ನೆಪದಲ್ಲಿ ವ್ಯಕ್ತಿಗಳು 45 ಲಕ್ಷ ಹೆಚ್ಚು ಹಣ ಸುಲಿಗೆ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇರಳದ ತಾವರಕಡನ್ ಮೂಲದ ಮಹಮ್ಮದ್ ಅಶ್ರಫ್ ಎಂಬವರು ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದು 2024ರ ಸೆಪ್ಟಂಬರ್ನಲ್ಲಿ ಎರಡನೇ ಮದುವೆಗಾಗಿ ಮಂಗಳೂರಿನ ಹೆಣ್ಣು ನೋಡಲು ಬಂದಿದ್ದರು. ಇವರಿಗೆ ಪರಿಚಯದ ಕಡಂಬು ಬಶೀರ್ ಮತ್ತು ಹನಿಟ್ರ್ಯಾಪ್ ರಾಣಿ ಮಾಣಿ ಸೆಫಿಯಾ ಅವರು ಅಶ್ರಫ್ ಗೆ ಹೆಣ್ಣು ತೋರಿಸುವುದಾಗಿ ಭರವಸೆ ನೀಡಿದ್ದಾರೆ. ಬಶೀರ್ ತನ್ನ ಸಂಬಂಧಿಕಳಾಗಿದ್ದ ಆಯಿಷತ್ ಮಿಸ್ರಿಯಾ ಎಂಬಾಕೆಯನ್ನು ವಿಟ್ಲದ ಸರಫುದ್ಧೀನ್ ಹಾಗೂ ಮತ್ತಿಬ್ಬರು ಕರೆತಂದು ಹೆಣ್ಣು ತೋರಿಸುವ ನಾಟಕವಾಡಿದ್ದಾರೆ.
ವಂಚಕರ ನಿಜಬಣ್ಣ ಅರಿಯದ ಮಹಮ್ಮದ್ ಅಶ್ರಫ್ ಹೆಣ್ಣಿಗೆ ಒಪ್ಪಿಗೆ ಸೂಚಿಸಿದ್ದು ಜೊತೆಯಾಗಿ ಕುಳಿತು ಫೊಟೋ, ವೀಡಿಯೋ ಮಾಡಿಸಿದ್ದಾರೆ. ಕೆಲದಿನಗಳ ಬಳಿಕ ಆರೋಪಿಗಳ ಪೈಕಿ ಕಡಂಬು ಬಶೀರ್ ಎಂಬಾತ ಮಹಮ್ಮದ್ ಅಶ್ರಫ್ ಗೆ ಕರೆ ಮಾಡಿದ್ದು ನಿನ್ನ ಮತ್ತು ಆಯಿಷತ್ ಮಿಸ್ರಿಯಾಳ ನಗ್ನ ಫೊಟೋ, ವೀಡಿಯೋಗಳು ನಮ್ಮಲ್ಲಿದ್ದು ಒಂದು ಕೋಟಿ ಹಣ ಕೊಡದಿದ್ದರೆ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಅಲ್ಲದೇ ಅಶ್ರಫ್ ಅವರ ಮೊದಲ ಪತ್ನಿ ಮತ್ತು ಸಂಬಂಧಿಕರ ಮೊಬೈಲಿಗೆ ಎಐನಿಂದ ಮಾಡಿದ್ದ ವೀಡಿಯೋ ಹಾಕಿದ್ದಾರೆ.
ಇದರಿಂದ ಬೆದರಿದ ಅಶ್ರಫ್ ಅವರು ಆರೋಪಿಗಳಿಗೆ ಇಪ್ಪತ್ತು ಲಕ್ಷ ನೀಡಿದ್ದಾರೆ. ಬಳಿಕ ಮತ್ತೆ ಬಶೀರ್, ಸರಫುದ್ಧೀನ್ ಹಾಗೂ ಇತರರು ಅಶ್ರಫ್ ಅವರನ್ನು ಕರೆಸಿಕೊಂಡು ಕೋಣೆಯಲ್ಲಿ ಕೂಡಿ ಹಾಕಿ ಥಳಿಸಿದ್ದು ಮತ್ತೆ ಮೂವತ್ತು ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಮರ್ಯಾದೆಗೆ ಅಂಜಿದ ಅಶ್ರಫ್ ಅವರು ಸರಪುದ್ಧೀನ್ ಖಾತೆಗೆ ಒಂಬತ್ತು ಲಕ್ಷ, ಬಶೀರ್, ಸೆಪಿಯಾ ಹಾಗೂ ಮತ್ತಿತರ ಆರೋಪಿಗಳಿಗೂ ಒಟ್ಟು ಇಪ್ಪತ್ನಾಲ್ಕು ಲಕ್ಷ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೆಲ್ಲ ಹಣ ನೀಡಿದ್ದರೂ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಮಹಮ್ಮದ್ ಅಶ್ರಫ್ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಅ ಕ್ರ : 145/2025 ಕಲಂ : 318(4), 308(2), 115(2), 351(2), r/w 3(5) ಬಿಎನ್ಎಸ್ -2023ರಂತೆ ಪ್ರಕರಣ ದಾಖಲಾಗಿದೆ.