ಧರ್ಮಸ್ಥಳದ (Dharmasthala) ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು (Mahesh Shetty Thimarody) ಮಂಗಳೂರಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ಆದ್ರೆ, ಇದಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಇದರಿಂದ ಮಹೇಶ್ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

Mahesh Shetty Thimarodi
ಬೆಂಗಳೂರು/ಮಂಗಳೂರು, (ಅಕ್ಟೋಬರ್ 13): ಗಡಿಪಾರು ಆದೇಶ ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಪುರಸ್ಕರಿಸಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಗಡಿಪಾರು ಆದೇಶ ಪ್ರಶ್ನಿಸಿ ಮಹೇಶ್ ತಿಮರೋಡಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಪೂರ್ಣಗೊಳಸಿದ್ದು, ಆದೇಶ ಕಾಯ್ದಿರಿಸಿದೆ. ಆದ್ರೆ, ಮುಂದಿನ ಆದೇಶದವರೆಗೆ ಬಲವಂತದ ಕ್ರಮ ಬೇಡ. ಗಡಿಪಾರು ಜಾರಿಗೊಳಿಸದಂತೆ ಮಹತ್ವದ ಸೂಚನೆ ನೀಡಿದೆ. ಇದರೊಂದಿಗೆ ಮಹೇಶ್ ಶೆಟ್ಟಿ ತಿಮರೋಡಿ ತಾತ್ಕಾಲಿಕವಾಗಿ ಗಡಿಪಾರಿನಿಂದ ಪಾರಾಗಿದ್ದಾರೆ.
ಧರ್ಮಸ್ಥಳದ (Dharmasthala) ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು (Mahesh Shetty Thimarody) ಮಂಗಳೂರಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ಮಹೇಶ್ ತಿಮರೋಡಿ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಆಗ್ರಹಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷಗಳ ಕಾಲ ಅವರನ್ನು ರಾಯಚೂರಿನ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿತ್ತು.
ಸಪ್ಟೆಂಬರ್ 20ರಂದೇ ಪುತ್ತೂರು ಸಹಾಯಕ ಆಯುಕ್ತರು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಆದ್ರೆ, ಇನ್ನೂ ಕೂಡ ಗಡಿಪಾರು ಪ್ರಕ್ರಿಯೆ ನಡೆದಿಲ್ಲ. ಯಾಕಂದ್ರೆ ಗಡಿಪಾರು ನೋಟಿಸ್ ಅನ್ನು ಪೊಲೀಸರು ಖುದ್ದು ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನೀಡಬೇಕು. ಅದಾದ ಬಳಿಕ ಗಡಿಪಾರು ಪ್ರಕ್ರಿಯೆ ನಡೆಯುತ್ತದೆ. ಆದರೆ, ಮಹೇಶ್ ಶೆಟ್ಟಿ ತಿಮರೋಡಿ ಕಳೆದ ಹಲವು ದಿನಗಳಿಂದ ಕಾಣೆಯಾಗಿದ್ದಾರೆ. ಹೀಗಾಗಿ ಪೊಲೀಸರು ಅವರ ಮನೆಗೆ ನೋಟಿಸ್ ಅಂಟಿಸಿ ಬಂದಿದ್ದರು. ಇದೀಗ ಕಾನೂನು ಹೋರಾಟ ನಡೆಸಿ ಗಡಿಪಾರಿನಿಂದ ಪಾರಾಗಲು ಕಸರತ್ತು ನಡೆಸಿದ್ದಾರೆ.