ಬೆಂಗಳೂರು, (ಅಕ್ಟೋಬರ್ 12): ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯದಲ್ಲಿ ಆರ್‌ಎಸ್‌ಎಸ್ ಸಂಘಟನೆಯ ಶಾಖೆ ಚಟುವಟಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಜಾಗಗಳಲ್ಲಿ ಯಾವುದೇ ರೀತಿಯ ಕಾರ್ಯಕ್ರಮ ನಡೆಸುವ ಮೊದಲು ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆರ್‌ಎಸ್‌ಎಸ್ ಸಂಘಟನೆ ಕರ್ನಾಟಕ ರಾಜ್ಯದಾದ್ಯಂತ ನಿರಂತರವಾಗಿ ಶಾಖೆಗಳನ್ನು ನಡೆಸುತ್ತಿದೆ. ಆದರೆ ಈ ಕಾರ್ಯಕ್ರಮಗಳಿಗೆ ಯಾವುದೇ ಅಧಿಕೃತ ಅನುಮತಿ ಪಡೆಯದೆ ಸರ್ಕಾರಿ ಜಾಗಗಳನ್ನು ಬಳಸುತ್ತಿರುವುದು ಕಾನೂನು ಉಲ್ಲಂಘನೆ ಎಂದು ಆರೋಪಿಸಿದರು.
ಆರ್‌ಎಸ್‌ಎಸ್ ಅವರು ಭಾರತ ದೇಶದ ತಾಲಿಬಾನಿಗಳು. ಅವರು ಸರಕಾರದಲ್ಲಿ ನೋಂದಾಯಿಸದ ಸಂಘಟನೆ. ನಾವು ಇಷ್ಟೆಲ್ಲ ಹೇಳುತ್ತಿದ್ದೇವೆ. ಅವರು ತಮ್ಮ ಸಂಸ್ಥೆ ರಿಜಿಸ್ಟರ್ ಆಗಿರುವುದನ್ನು ತೋರಿಸಲಿ. ನೋಂದಣಿ ಇಲ್ಲದೆ ಇಷ್ಟು ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ. ಪ್ಯಾಲೇಸ್ತೀನ್ ಪರವಾಗಿ ಪ್ರತಿಭಟನೆ ಮಾಡಿದರೆ ಪೊಲೀಸರಿಂದ ತಕ್ಷಣ ಬಂಧನವಾಗುತ್ತದೆ. ಆದರೆ ಆರ್‌ಎಸ್‌ಎಸ್ ಶಾಖೆಗಳನ್ನು ಸರ್ಕಾರಿ ಮೈದಾನಗಳಲ್ಲಿ ನಡೆಸಲು ಪೊಲೀಸರು ಅನುಮತಿ ನೀಡುತ್ತಾರೆ. ಇದೇಕೆ ಎಂಬುದನ್ನು ನಾನು ಪ್ರಶ್ನಿಸುತ್ತಿದ್ದೇನೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಲು ಹೋದ ಆರ್‌ಎಸ್‌ಎಸ್ ಸದಸ್ಯರ ಮೇಲೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ಅವರನ್ನು ಬಂಧಿಸಿ ಕೇಸ್‌ಗಳನ್ನೂ ದಾಖಲಿಸಲಾಗಿದೆ. ಇದೇ ರೀತಿಯ ಕ್ರಮವನ್ನು ಕರ್ನಾಟಕದಲ್ಲಿಯೂ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.