ಗಂಗಾವತಿಯಲ್ಲಿ ಬಿಜೆಪಿ ಯುವ ಮುಖಂಡ ವೆಂಕಟೇಶ್ ಕುರುಬರ ಭೀಕರ ಕೊಲೆ ಇಡೀ ನಗರವನ್ನು ಬೆಚ್ಚಿ ಬೀಳಿಸಿದೆ. ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷವೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. 25 ವಯಸ್ಸು ಒಳಗಿನ ಯುವಕರಿಂದ ವೆಂಕಟೇಶ್ ಕೊಲೆ ಮಾಡಲಾಗಿದೆ. ಸದ್ಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ನಾಲ್ವರು ಬಂಧಿತ ಯುವಕರು
ಕೊಪ್ಪಳ, ಅಕ್ಟೋಬರ್ 08: ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ (BJP) ಯುವ ಮುಖಂಡ ವೆಂಕಟೇಶ್ ಕುರುಬರ ಭೀಕರ ಕೊಲೆಗೆ ಇಡೀ ಗಂಗಾವತಿ ನಗರ ಬೆಚ್ಚಿ ಬಿದ್ದಿದೆ. ತಡರಾತ್ರಿ ದುಷ್ಕರ್ಮಿಗಳು ವೆಂಕಟೇಶ್ ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಮತ್ತೊಂದು ಶಾಕಿಂಗ್ ವಿಚಾರ ಎಂದರೆ ಬಂಧಿತರಾದ ಭೀಮ್ ಅಲಿಯಾಸ್ ಭರತ್, ಸಲೀಂ, ವಿಜಯ್ ಮತ್ತು ಧನರಾಜ್ ವಯಸ್ಸು 25 ದಾಟಿಲ್ಲ. ನಾಲ್ವರನ್ನು ವಶಕ್ಕೆ ಪಡೆದಿರುವ ಗಂಗಾವತಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಗಂಗಾವತಿ ಮಂಡಲದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ನನ್ನು ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ರಾಯಚೂರು ರಸ್ತೆಯ ಲೀಲಾವತಿ ಆಸ್ಪತ್ರೆ ಮುಂಭಾಗದಲ್ಲಿ ಬೈಕ್ ಮೇಲೆ ಸ್ನೇಹಿತರೊಂದಿಗೆ ಬರುತ್ತಿದ್ದ ವೆಂಕಟೇಶ್ನಿಗೆ ಕಾರಿನಿಂದ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ವೆಂಕಟೇಶ್ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ.
ವೆಂಕಟೇಶ್ ನನ್ನ ಪಕ್ಕಾ ಪ್ಲ್ಯಾನ್ ಮಾಡಿ ಕೊಲೆ ಮಾಡಿದ ನಾಲ್ವರು ಆರೋಪಿಗಳು ಪಕ್ಕದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ವೆಂಕಟೇಶ್ ನನ್ನ ಹತ್ಯೆ ಮಾಡಿದ ನಾಲ್ವರು ಯುವಕರು 25 ವಯಸ್ಸಿನ ಒಳಗಿನವರು. ಇನ್ನು ಪ್ರಮುಖ ಆರೋಪಿಯಾದ ರವಿ ಹಾಗೂ ಕಾರ್ತಿಕ ಸೇರಿ ಇನ್ನು ಕೆಲವರು ಪರಾರಿಯಾಗಿದ್ದಾರೆ. ಬಂಧಿತರ ವಿಚಾರಣೆ ಬಳಿಕ ಹತ್ಯೆಯ ಹಿಂದಿರುವ ಇನ್ನು ಕೆಲವರ ಹೆಸರು ಬಹಿರಂಗವಾಗಲಿದೆ.
ಹಳೇ ದ್ವೇಷ ಕೊಲೆಗೆ ಕಾರಣ
ಇಷ್ಟೊಂದು ಭೀಕರ ಕೊಲೆಗೆ ಕಾರಣ ಹಳೇ ದ್ವೇಷ. 2023 ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಸ್ಪೀಟ್ ವಿಚಾರಕ್ಕೆ ಗ್ಯಾಂಗ್ ಒಂದು ವೆಂಕಟೇಶ್ಗೆ ಬೇಕಾಗಿದ್ದ ಮಾರತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿತ್ತು. ಆದರೆ ಅದೃಷ್ಟವಶಾತ್ ಮಾರುತಿ ಬದುಕುಳಿದಿದ್ದ. ಆದರೆ ಮೂರು ತಿಂಗಳ ಹಿಂದೆ ಮಾರುತಿ ಸಾವನ್ನಪ್ಪಿದ್ದ. ಈತನ ಹತ್ಯೆಗೆ ಹೊಂಚು ಹಾಕಿದ್ದು ರವಿ ಗ್ಯಾಂಗ್. ರವಿ ಗ್ಯಾಂಗ್ ಅಂದರೆ ಒಂದು ಕಾಲದಲ್ಲಿ ವೆಂಕಟೇಶ್ ಹಾಗೂ ರವಿ ಇಬ್ಬರು ಗುರು ಶಿಷ್ಯರು.
ಇಂದು ಹತ್ಯೆಯ ಪ್ರಮುಖ ಆರೋಪಿಯಾಗಿರುವ ರವಿ, ಒಂದು ಕಾಲದಲ್ಲಿ ವೆಂಕಟೇಶ್ ಶಿಷ್ಯನಾಗಿದ್ದ. ಮೇಲಾಗಿ ಇಬ್ಬರು ಒಂದೇ ಸಮುದಾಯದವರು. ನಿನ್ನೆ ರಾತ್ರಿ ರವಿ ಮತ್ತು ಸಹಚರರು ವೆಂಕಟೇಶ್ ಕುರುಬರನ್ನ ಹತ್ಯೆ ಮಾಡಿದ್ದಾರೆ. 2023 ರಲ್ಲಿ ಮಾರುತಿ ಹತ್ಯೆ ಯತ್ನ ನಡೆದಿದ್ದಾಗ ವೆಂಕಟೇಶ್ ಆತನ ಬೆನ್ನಿಗೆ ನಿಂತಿದ್ದ. ಅಲ್ಲದೆ ಕಲ್ಲು ಎತ್ತಿ ಹಾಕಿದವರ ಬಂಧನ ಆಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದು ರವಿ ಮತ್ತು ಸಹಚರರ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ಎರಡು ವರ್ಷದಿಂದ ಆ ಸೇಡಿಟ್ಟುಕೊಂಡಿದ್ದ ರವಿ ಮತ್ತು ಗ್ಯಾಂಗ್, ನಿನ್ನೆ ಪಕ್ಕಾ ಪ್ಲ್ಯಾನ್ ಮಾಡಿ ಸಿನೀಮಿಯ ರೀತಿಯಲ್ಲಿ ವೆಂಕಟೇಶ್ ನನ್ನ ಹತ್ಯೆ ಮಾಡಿದ್ದಾರೆ.