ತುಮಕೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಯಡಿಯೂರು ಬಳಿ ಮಾರ್ಕೋನಹಳ್ಳಿ ಡ್ಯಾಂ ನೀರಿಗೆ ಇಳಿದಿದ್ದ ಒಂದೇ ಕುಟುಂಬದ 7 ಜನರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈಗಾಗಲೇ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಒಬ್ಬರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದ ನಾಲ್ವರು ಕಣ್ಮರೆಯಾಗಿದ್ದು, ಶೋಧ ಕಾರ್ಯ ನಡೆದಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Markonahalli Dam
ತುಮಕೂರು, (ಅಕ್ಟೋಬರ್ 07): ಮಾರ್ಕೋನಹಳ್ಳಿ ಡ್ಯಾಂ ( markonahalli dam) ನೀರಿನಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಏಳು ಜನರು ಕೊಚ್ಚಿಕೊಂಡು ಹೋಗಿದ್ದು, ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದೆ. ತುಮಕೂರು (tumakuru) ಜಿಲ್ಲೆ ಕುಣಿಗಲ್ ತಾಲೂಕಿನ ಯಡಿಯೂರು ಬಳಿ ಮಾರ್ಕೋನಹಳ್ಳಿ ಡ್ಯಾಂ ನೀರಿಗಿಳಿದ್ದ ಒಂದೇ ಕುಟುಂಬದ 7 ಜನರಲ್ಲಿ ಈಗಾಗಲೇ ಇಬ್ಬರ ಮೃತದೇಹ ಸಿಕ್ಕಿದ್ದು, ಮತ್ತೋಬ್ಬರನ್ನು ರಕ್ಷಣೆ ಮಾಡಲಾಗಿದೆ. ಆದರೆ ಇನ್ನು ನಾಲ್ವರು ಏನಾಗಿದ್ದಾರೆ ಎಂದು ಗೊತ್ತಿಲ್ಲ. ಜಲಾಶಯದಲ್ಲಿ ಮುಳುಗಿ ಸಾಜಿಯಾ, ಅರ್ಬಿನ್ ಸಾವನ್ನಪ್ಪಿದ್ದಾರೆ. ಇನ್ನು ಕಣ್ಮರೆಯಾಗಿರುವ ತಬಾಸುಮ್, ಶಬಾನ, ಮಿಫ್ರಾ, ಮಹಿಬ್ ಗಾಗಿ ಶೋಧ ಕಾರ್ಯ ನಡೆದಿದೆ.
ಸಾಜಿಯಾ, ಅರ್ಬಿನ್ ಮೃತರು. ತಬಾಸುಮ್ (45), ಶಬಾನ (44), ಮಿಫ್ರಾ (4) ಹಾಗೂ ಮಹಿಬ್ (1) ಕಣ್ಮರೆಯಾದವರು. ಇನ್ನು ನವಾಜ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲರೂ ತುಮಕೂರು ನಗರದ ಬಿ.ಜಿ.ಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ.
ಕುಣಿಗಲ್ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮದ ಸಂಬಂಧಿಕರ ಮನೆಗೆ ಆಗಮಿಸಿದ್ದು, ಊಟ ಮುಗಿಸಿಕೊಂಡು ಜಲಾಶಯಕ್ಕೆ ಹೋಗಿದ್ದರು. ಹಿನ್ನೀರಿನ ಕಾಲುವೆಗೆ ಇಳಿಯುತ್ತಿದ್ದಂತೆಯೇ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸದ್ಯ ಈ ಸಂಬಂಧ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಹಾಗೂ ಅಮೃತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ನಾಪತ್ತೆ ಆಗಿರುವವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.