ಸೆಂಟ್ ಸ್ಪ್ರೇ ಮಾಡಿ ಹಸುವಿಗೆ ಬೆಂಕಿ ಹಚ್ಚಿದ ಎಂಬ ಕಾರಣಕ್ಕೆ ಅಪ್ರಾಪ್ತನ ಮೇಲೆ ಹಿಂದೂ ಸಂಘಟನೆಯ ನಾಯಕರು ಹಲ್ಲೆ ನಡೆಸಿರುವ ಆರೋಪ ಚಿಕ್ಕಮಗಳೂರಲ್ಲಿ ಕೇಳಿಬಂದಿದೆ. ಘಟನೆ ಬಗ್ಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿದ್ದು, ಪ್ರಕರಣ ಕೋಮು ಸ್ವರೂಪ ಪಡೆದುಕೊಂಡಿದೆ.

ಬಾಲಕನ ಮೇಲೆ ಹಲ್ಲೆ?
ಚಿಕ್ಕಮಗಳೂರು, ಅಕ್ಟೋಬರ್ 06: ಅಪ್ರಾಪ್ತನೊಬ್ಬ ಸೆಂಟ್ ಸ್ಪ್ರೇ ಮಾಡಿ ಹಸುವಿಗೆ ಬೆಂಕಿ ಹಚ್ಚಿದ ಹಿನ್ನಲೆ ಆತನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಚಿಕ್ಕಮಗಳೂರಿನ (Chikkamagaluru) ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರುಗಳು ದಾಖಲಾಗಿವೆ. ಗಾಯಾಳು ಬಾಲಕನನ್ನು ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಸದ್ಯ ಪ್ರಕರಣ ಕೋಮು ಸ್ವರೂಪ ಪಡೆದುಕೊಂಡಿದೆ.
ಘಟನೆ ಏನು?
ನಗರದ ವಿಜಯಪುರ ಬಡಾವಣೆಯಲ್ಲಿ ಶುಕ್ರವಾರ ಅಪ್ರಾಪ್ತನೊಬ್ಬ ಬಿಡಾಡಿ ಹಸುವಿನ ಮೇಲೆ ಸೆಂಟ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದ್ದು, ಇದನ್ನ ಕಂಡ ಸ್ಥಳೀಯರು ಆತನನ್ನು ಪ್ರಶ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಹಾಗೂ ಬಜರಂಗದಳ ಹಾಸನ ವಿಭಾಗದ ಸಹ ಸಂಯೋಜಕ ಶಾಮ್ ಗೌಡ ಇಬ್ಬರೂ ಸೇರಿ ಆ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಜಿಲ್ಲೆಯಾದ್ಯಂತ ಭಾರೀ ವೈರಲ್ ಆಗಿದ್ದು, ನೈತಿಕ ಪೊಲೀಸ್ ಗಿರಿಯ ಆರೋಪವೂ ಕೇಳಿಬಂದಿದೆ. ಸದ್ಯ ಅಪ್ರಾಪ್ತನ ವಿರುದ್ಧ ಬಸವನಹಳ್ಳಿ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೊಳಗಾದ ಬಾಲಕನ ತಾಯಿಯೂ ಸಂತೋಷ್ ಹಾಗೂ ಶಾಮ್ ವಿರುದ್ಧ ಪ್ರತಿದೂರು ನೀಡಿದ್ದು, ನನ್ನ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಪ್ರಾಪ್ತನ ಮೇಲಿನ ಹಲ್ಲೆಯನ್ನ ಮುಸ್ಲಿಂ ಸಂಘಟನೆಗಳು ಖಂಡಿಸಿದ್ದು, ಹಸುವಿನ ಮೇಲೆ ಬೆಂಕಿ ಹಾಕುವಂತಹ ಕೆಲಸವನ್ನ ಯಾರು ಮಾಡಿದ್ರೂ ಕೂಡ ಅದು ತಪ್ಪೇ. ಹಾಗಂತ ಒಬ್ಬ ಬಾಲಕನ ಮೇಲೆ ಹಲ್ಲೆ ಮಾಡಿರೋದನ್ನೂ ಒಪ್ಪಲು ಸಾಧ್ಯವಿಲ್ಲ ಎಂದಿವೆ. ಹಿಂದಿನಿಂದಲೂ ಚಿಕ್ಕಮಗಳೂರಿನಲ್ಲಿ ಒಂದು ತಂಡ ಈ ರೀತಿ ದನದ ಹೆಸರಿನಲ್ಲಿ ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಅವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಅಪ್ರಾಪ್ತನ ಮೇಲೆ ಪೊಲೀಸರ ಮುಂದೆಯೇ ಹಲ್ಲೆ ಮಾಡಲಾಗಿದೆ. ಹಲ್ಲೆ ನಡೆಯುವಾಗ ಪೊಲೀಸರು ಸ್ಥಳದಲ್ಲಿದ್ದರೂ ಅವರನ್ನು ಬಂಧಿಸಿಲ್ಲ, ಬದಲಾಗಿ ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಇದರಿಂದ ಪೊಲೀಸರ ನಡೆಯ ಮೇಲೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿವೆ.