
ಪಾಟ್ನಾ: ಕೊನೆಗೂ ಬಿಹಾರ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಈ ಬಾರಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 6 ರಂದು ಮೊದಲ ಹಂತ, ನವೆಂಬರ್ 11ರಂದು 2ನೇ ಹಂತದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ನವೆಂಬರ್ 14 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ತಿಳಿಸಿದ್ದಾರೆ.
ಬಿಹಾರದಲ್ಲಿರುವ 243 ವಿಧಾನಸಭಾ ಕ್ಷೇತ್ರಗಳ ಪೈಕಿ 203 ಸಾಮಾನ್ಯ ಕ್ಷೇತ್ರಗಳಾಗಿದ್ದು, 2 ಎಸ್ಟಿ ಹಾಗೂ 38 ಎಸ್ಸಿ ಮೀಸಲು ಕ್ಷೇತ್ರಗಳಾಗಿವೆ. ಬಿಹಾರದಲ್ಲಿ ಒಟ್ಟು 7.43 ಕೋಟಿ ಮತದಾರರು ಇದ್ದಾರೆ. ಈ ಪೈಕಿ 3.92 ಕೋಟಿ ಪುರುಷ ಮತದಾರರು, 3.50 ಕೋಟಿ ಮಹಿಳಾ ಮತದಾರರು, 1,725 ತೃತೀಯಲಿಂಗಿ ಮತದಾರರಿದ್ದಾರೆ, 14.01 ಲಕ್ಷ ಫಸ್ಟ್ ಟೈಮ್ ವೋಟರ್ಸ್ ಇದ್ದಾರೆ. ಒಟ್ಟು 90,712 ಬೂತ್‌ಗಳನ್ನ ನಿರ್ಮಾಣ ಮಾಡಲಾಗಿದ್ದು, ನಗರದಲ್ಲಿ 13,911 ಹಾಗೂ ಗ್ರಾಮೀಣ ಭಾಗದಲ್ಲಿ 76,801 ಬೂತ್‌ಗಳಿರಲಿವೆ. ಎಲ್ಲಾ ಬೂತ್‌ಗಳಲ್ಲೂ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೇ ಮಾಡಲಾಗಿದೆ.
ಈ ಬಾರಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ (Nitish Kumar) ನೇತೃತ್ವದ ಎನ್‌ಡಿಎ (NDA) ಮತ್ತು ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇನ್ನುಳಿದಂತೆ ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಬಿಹಾರದಲ್ಲಿ 2020ರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆದಿತ್ತು. ಎನ್‌ಡಿಎ ಜಯಗಳಿಸಿದ ಬಳಿಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದರು. ಹೀಗಿದ್ದರೂ 2022 ರಲ್ಲಿ ನಿತೀಶ್ ಕುಮಾರ್ ಎನ್‌ಡಿಎ ತೊರೆದು ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ ಜೊತೆ ಸೇರಿ ಸರ್ಕಾರ ರಚಿಸಿದ್ದರು. 2024ರಲ್ಲಿ ಮತ್ತೆ ನಿತೀಶ್ ಕುಮಾರ್ ಮಹಾಘಟಬಂಧನ್ ಜೊತೆಗಿನ ಸಂಬಂಧ ಕಡಿದುಕೊಂಡು ಎನ್‌ಡಿಎ ಜೊತೆಗೆ ಕೈಜೋಡಿಸಿ ಅಧಿಕಾರಕ್ಕೆ ಏರಿದ್ದರು.