
ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಹಿರಿಯ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ (CJI BR Gavai) ಅವರ ಮೇಲೆ ಶೂ ಎಸೆಯಲು ಮುಂದಾದ ಘಟನೆ ಇಂದು ನಡೆದಿದೆ.
ಕೋರ್ಟ್ ಹಾಲ್‌ನಲ್ಲಿ ಕಿಶೋರ್ ರಾಕೇಶ್ ಶೂ ತೆಗೆಯುತ್ತಿದ್ದಾಗ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ವಕೀಲರನ್ನು ತಡೆದು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಕರೆದುಕೊಂಡು ಹೋಗುವಾಗ ಸನಾತನ ಧರ್ಮಕ್ಕೆ ಅವಮಾನ ಮಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಕೂಗಿಕೊಂಡು ಹೋಗಿದ್ದಾರೆ.
ಈ ವೇಳೆ ಸಿಜೆಐ ಯಾವುದೇ ಯಾವುದೇ ಮುಜುಗರಕ್ಕೊಳಗಾಗದೇ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರಿಗೆ ತಮ್ಮ ವಾದಗಳನ್ನು ಮುಂದುವರಿಸುವಂತೆ ಕೇಳಿಕೊಂಡರು. ಈ ಘಟನೆಯಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿ ಕಲಾಪ ಮುಂದುವರಿಸಿದರು.

ಏನಿದು ಪ್ರಕರಣ?
ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಗೆ ಸೇರ್ಪಡೆಯಾಗಿರುವ ಖಜುರಾಹೊ ದೇವಾಲಯ ( Lord Vishnu Idol in Khajuraho) ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಿಜೆಐ ಗವಾಯಿ ನೇತೃತ್ವದ ಪೀಠ ವಜಾಗೊಳಿಸಿತ್ತು.
ಈ ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ (ASI) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಏನೇ ಮಾಡುವುದರಿದ್ದರೂ ಎಎಸ್‌ಐ ಅನುಮತಿ ನೀಡಬೇಕಾಗಿದೆ. ಕ್ಷಮಿಸಿ ಎಂದು ತಿಳಿಸಿದ್ದರು.
ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿಗಾಗಿ ಈ ಅರ್ಜಿಯನ್ನು ನೀವು ಸಲ್ಲಿಕೆ ಮಾಡಿದ್ದೀರಿ. ಹೋಗಿ ದೇವರಲ್ಲೇ ಏನಾದರೂ ಮಾಡುವಂತೆ ಬೇಡಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ ಎಂದು ಸಿಜೆಐ ಗವಾಯಿ ಹೇಳಿದ್ದರು.
ಮೊಘಲ್ ಆಕ್ರಮಣದ ಸಮಯದಲ್ಲಿ ವಿಗ್ರಹವು ವಿರೂಪಗೊಂಡಿದ್ದು, ಅದನ್ನು ಪುನಃಸ್ಥಾಪಿಸಲು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಅದು ಅದೇ ಸ್ಥಿತಿಯಲ್ಲಿದೆ ಎಂದು ರಾಕೇಶ್ ದಲಾಲ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.