ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 27ರಂದು ನಡೆದ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೆ ಬಂಧಿತರಾಗಿರುವ 13 ಆರೋಪಿಗಳು ಸೇರಿದಂತೆ ಒಟ್ಟು 14 ಮಂದಿ ಮೇಲೆ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (KCOCA Act – ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳ ಕಾನೂನುಬಾಹಿರ ಚಟುವಟಿಕೆಗಳು ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷಕ್ಕೆ ಕಾರಣವಾಗಿದ್ದರಿಂದ, ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ದಿನಾಂಕ 27-05-2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಬ್ದುಲ್ ರೆಹಮಾನ್ ಅವರ ಕೊಲೆ ನಡೆದಿತ್ತು.
ತನಿಖೆ ವೇಳೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 13 ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ, ಭರತ್ ರಾಜ್ ಯಾನೆ ಭರತ್ ಕುಮ್ಡೇಲು ತಲೆ ಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಏನಿದು ಕೋಕಾ ಕಾಯ್ದೆ:ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಎಂದು ಕರೆಯಲಾಗಿದ್ದು, ಒಂದು ಭಾರಿ ಕೋಕಾ ಅಸ್ತ್ರ ಪ್ರಯೋಗಿಸಿದರೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಆರೋಪಿಗಳು ಪೊಲೀಸ್ ಕಸ್ಟಡಿಗೆ ಒಳಪಟ್ಟಿದ್ದರೆ, ಒಂದು ತಿಂಗಳವರೆಗೆ ವಿಸ್ತರಣೆ ಮಾಡಬಹುದು. ಪ್ರಮುಖವಾಗಿ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಲುಬಹುದು.
ಇದರಿಂದ ಆರೋಪಿಗಳಿಗೆ ಗರಿಷ್ಠ ಜೀವಾವಧಿ ಅಥವಾ ಗಲ್ಲು ಶಿಕ್ಷೆಯೂ ಆಗಬಹುದು. ಅಲ್ಲದೇ ಆರೋಪಿಗಳಿಗೆ ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹5 ಲಕ್ಷದವರೆಗೂ ದಂಡ ವಿಧಿಸಬಹುದು.
‘ಕೋಕಾ’ ಕಾಯ್ದೆ ಅನ್ವಯ:
ಸದ್ರಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಕೇವಲ ಈ ಘಟನೆಗಷ್ಟೇ ಸೀಮಿತರಾಗಿಲ್ಲ. ಅವರು ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು ಸೇರಿದಂತೆ ಸಮಾಜದ ಶಾಂತಿ ಕದಡುವ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಸಂಘರ್ಷ ಮತ್ತು ಅಶಾಂತಿಯನ್ನು ಸೃಷ್ಟಿಸುತ್ತಿದ್ದ ಈ ಸಂಘಟಿತ ಅಪರಾಧಿಗಳ ವಿರುದ್ಧ ಈಗ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (KCOCA Act) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯು ಸಂಘಟಿತ ಅಪರಾಧಗಳ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಒಳಗೊಂಡಿದೆ. ಪ್ರಕರಣದ ಮುಂದಿನ ತನಿಖೆಯನ್ನು ಕೋಕಾ ಕಾಯ್ದೆಯ ಅಡಿಯಲ್ಲಿ ನಡೆಸಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.