
ಕಾರ್ಕಳ: ಹೆತ್ತ ತಾಯಿಯೇ ಮಗಳ ಹತ್ಯೆಗೈದ ಭೀಕರ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. ಹಿರ್ಗಾನ ನಿವಾಸಿ ಶೇಖ್ ಮುಸ್ತಫಾ ಎಂಬವರ ಮಗಳು ಶಿಫನಾಝ್ (17) ಮೃತಳು. ಆರೋಪಿ ಗುಲ್ಝಾರ್ ಬಾನು (45) ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೆಪ್ಟೆಂಬರ್ 20ರಂದು ತಾಯಿ-ಮಗಳ ನಡುವೆ ಪ್ರೀತಿಯ ವಿಚಾರದಲ್ಲಿ ಜಗಳ ಉಂಟಾಗಿತ್ತು. ಶಿಫನಾಝ್ ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದರಿಂದ ಕುಪಿತಗೊಂಡ ತಾಯಿ, ಮಗಳ ಬಾಯಿಗೆ ಬಟ್ಟೆ ತುರುಕಿಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಫನಾಜ್ ತಂದೆ ಶೇಖ್ ಮುಸ್ತಾಫ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ನಿಜಾಂಶ ಬಹಿರಂಗವಾಗಿದೆ. ಶಿಫನಾಜ್ ಆತ್ಮಹತ್ಯೆ ಮಾಡಿಕೊಳ್ಳದೆ, ಉಸಿರುಗಟ್ಟಿಸಿ ಕೊಲೆಗೀಡಾಗಿರುವುದು ದೃಢಪಟ್ಟಿದೆ. ಪೊಲೀಸರು ಗುಲ್ಜಾರ್ ಬಾನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ತಾಯಿಯೇ ಮರ್ಯಾದೆಗಂಜಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಅ.2ರಂದು ಆರೋಪಿ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಮಂಗಳೂರು ಜೈಲಿನಲ್ಲಿರಿಸಲಾಗಿದೆ. ಕಾರ್ಕಳ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.