
ಉಳ್ಳಾಲ: ಉಳ್ಳಾಲ ದಸರಾ ಕಾರ್ಯಕ್ರಮದ ಶೋಭಾಯಾತ್ರೆ ಸಂದರ್ಭದಲ್ಲಿ ಸ್ತಬ್ಧಚಿತ್ರಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕ ತಡರಾತ್ರಿ ಬಳಸದಂತೆ ನಿಲ್ಲಿಸಿದ ಉಳ್ಳಾಲ ಪೊಲೀಸರ ಹಾಗೂ ಸ್ತಬ್ದಚಿತ್ರ ಬಳಿಯಿದ್ದ ಯುವಕರ ನಡುವೆ ನಡೆದ ವಾಗ್ವಾದದಿಂದ ಮೂವರು ಯುವಕರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ಖಂಡಿಸಿ ಉಳ್ಳಾಲ ಪೊಲೀಸ್ ಠಾಣೆಯೆದುರೇ ಶಾರದಾ ವಿಗ್ರಹವನ್ನು ಇಟ್ಟು ಇಡೀ ಭಕ್ತಸಮೂಹ ಎರಡೂವರೆ ಗಂಟೆಗಳ ಕಾಲ ಪ್ರತಿಭಟಿಸಿದ್ದು, ಪೊಲೀಸ್ ವಶದಲ್ಲಿದ್ದ ಇಬ್ಬರನ್ನು ಬಿಡುಗಡೆಗೊಳಿಸಿದ ನಂತರ ಶೋಭಾಯಾತ್ರೆ ಮುಂದುವರಿದು ಶುಕ್ರವಾರ ಬೆಳಗ್ಗಿನ ವೇಳೆ ಶಾರದಾ ಮೂರ್ತಿಯ ವಿಸರ್ಜನೆ ಉಳ್ಳಾಲ ಸಮುದ್ರ ತೀರದಲ್ಲಿ ನಡೆದಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಕ್ಷಿತ್, ಆಶಿಶ್ ಮತ್ತು ಅಶ್ವತ್ಥ್ ಎಂಬವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದು ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಶೋಭಾಯಾತ್ರೆಯನ್ನು ಸ್ಥಗಿತಗೊಳಿಸಿ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಉಳ್ಳಾಲದ ಶಾರದಾ ನಿಕೇತನದಲ್ಲಿ ಜಲಸ್ಥಂಭನದ ಪ್ರಯುಕ್ತ ನಡೆದ ಶೋಭಾಯಾತ್ರೆಯು ಉಳ್ಳಾಲ ಪೇಟೆ, ವಿದ್ಯಾರಣ್ಯ ನಗರ, ಚೀರುಂಭ ಭಗವತೀ ಕ್ಷೇತ್ರದ ಒಳರಸ್ತೆಯಾಗಿ ಉಳ್ಳಾಲ ಪೊಲೀಸ್ ಠಾಣೆಯ ಬಳಿಯ ಅಬ್ಬಕ್ಕ ವೃತ್ತಕ್ಕೆ ಬಂದಿತ್ತು. ಕೆಲ ಟ್ಯಾಬ್ಲೋಗಳು ಠಾಣೆಯ ಮುಂಭಾಗದಿಂದ ಹಾದು ಹೋಗಿದ್ದು, ರಾತ್ರಿ ವೇಳೆಗೆ ಪೊಲೀಸರು ಬಾಕಿ ಉಳಿದ ಟ್ಯಾಬ್ಲೋಗಳ ಧ್ವನಿವರ್ಧಕಗಳನ್ನ ಸ್ಥಗಿತಗೊಳಿಸಿದ್ದಾರೆ. ಈ ವೇಳೆ ನೆರೆದಿದ್ದ ಯುವಕರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ.


ಉದ್ರಿಕ್ತ ಜನರು ಶೋಭಾಯಾತ್ರೆಯನ್ನು ಸ್ಥಗಿತಗೊಳಿಸಿ ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಯುವಕರನ್ನ ಬಿಡುಗಡೆಗೊಳಿಸಿದರೆ ಮಾತ್ರ ಶೋಭಾಯಾತ್ರೆ ನಡೆಸುವುದಾಗಿ ಘೋಷಣೆ ಕೂಗಿದ್ದಾರೆ. ಈ ಸಂದರ್ಭ ಠಾಣೆಗೆ ಭೇಟಿ ನೀಡಿದ ಡಿಸಿಪಿ ಮಿಥುನ್ ಹೆಚ್.ಎನ್ ಅವರು ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡ ಸಂತೋಷ್ ರೈ ಬೋಳಿಯಾರ್, ಮೊಗವೀರ ಮುಖಂಡ ಯಶವಂತ್ ಅಮೀನ್, ಉತ್ಸವ ಸಮಿತಿ ಅಧ್ಯಕ್ಷ ಭರತ್ ಉಳ್ಳಾಲ್ ಠಾಣೆಗೆ ಭೇಟಿ ನೀಡಿ ಬಂಧಿತರ ಬಿಡುಗಡೆಗೆ ಒತ್ತಾಯಿಸಿದರು. ಅದಕ್ಕೂ ಪೊಲೀಸರು ಒಪ್ಪದೇ ಇದ್ದಾಗ ನಾಯಕರು ಮುಂದಿನ ಪರಿಣಾಮಗಳನ್ನು ನೀವೇ ಎದುರಿಸಿರಿ ಎಂದು ಹೊರನಡೆದಿದ್ದಾರೆ. ಆದರೆ ಪಟ್ಟುಬಿಡದ ಭಕ್ತಸಮೂಹ ಪ್ರತಿಭಟನೆ ಮುಂದುವರಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆ ಬಳಿಕ 4.30ರ ಸುಮಾರಿಗೆ ವಶದಲ್ಲಿರುವ ಆಶೀಶ್ ಮತ್ತು ಅಶ್ವತ್ ಇಬ್ಬರನ್ನು ಬಿಡುಗಡೆಗೊಳಿಸಿದರು. ರಕ್ಷಿತ್ ವಿರುದ್ಧ ಈಗಾಗಲೇ ಪ್ರಕರಣಗಳಿದ್ದು, ಇದೀಗ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿರುವುದರಿಂದ ಬಂಧಿಸಲಾಗಿದೆ. ದಸರಾ ಶೋಭಾಯಾತ್ರೆಯಲ್ಲಿ ಉಳ್ಳಾಲ ಪೊಲೀಸರು ಠಾಣೆಯ ಮುಂಭಾಗದಲ್ಲಿ ಹೂ ಹಣ್ಣು ಸಮರ್ಪಿಸಿ ಮಂಗಳಾರತಿ ಸಲ್ಲಿಸುವುದು ವಾಡಿಕೆಯಾಗಿದೆ. ಈ ಬಾರಿ ಪೊಲೀಸರು ಶೋಭಾ ಯಾತ್ರೆಗೆ ಅಡ್ಡಿಪಡಿಸಿದ್ದರಿಂದ ಅಸಮಧಾನಗೊಂಡಿದ್ದ ಶಾರದೆಯ ಪಲ್ಲಕ್ಕಿ ಹೊತ್ತಿದ್ದ ಭಜಕರ ತಂಡವು ಪೊಲೀಸ್ ಠಾಣೆಯ ಮುಂದೆ ಮಂಗಳಾರತಿಗೆ ಅವಕಾಶ ನೀಡದೆ ಮುಂದಕ್ಕೆ ತೆರಳಿದ್ದಾರೆ.
ಸೇವಂತಿಗುಡ್ಡೆಯ ರಕ್ಷಿತ್ ಶೆಟ್ಟಿ (27) ಎಂಬಾತನ ವಿರುದ್ಧ ಪಿಎಸ್ ಐ ಕೃಷ್ಣ ಅವರ ದೂರಿನ ಮೇರೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.