Published : Oct 02 2025, 06:38 PM IST

RSS Workers
Police detained 39 RSS workers in Chennai ಚೆನ್ನೈನ ಪೋರೂರ್ ಬಳಿಯ ಸರ್ಕಾರಿ ಶಾಲೆಯೊಂದರಲ್ಲಿ ಅನುಮತಿಯಿಲ್ಲದೆ ಪೂಜೆ ಮತ್ತು ವಿಶೇಷ ಶಾಖೆ ತರಬೇತಿ ಆಯೋಜಿಸಿದ್ದಕ್ಕಾಗಿ 39 ಆರ್ಎಸ್ಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ (ಅ.2): ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಗುರುವಾರ ಪೊಲೀಸರು 39 ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಚೆನ್ನೈನ ಪೋರೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಸರ್ಕಾರಿ ಶಾಲೆಯಲ್ಲಿ ಅನುಮತಿಯಿಲ್ಲದೆ ಪೂಜೆ ಮತ್ತು ವಿಶೇಷ ಶಾಖೆ ತರಬೇತಿಯನ್ನು ಆಯೋಜಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ. ಅಕ್ಟೋಬರ್ 2 ರಂದು ಆರ್ಎಸ್ಎಸ್ ತನ್ನ 100 ನೇ ವಾರ್ಷಿಕೋತ್ಸವವನ್ನು ಆಚರಣೆ ಮಾಡುತ್ತಿದ್ದ ಸಮಯದಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಚೆನ್ನೈ ಪೊಲೀಸರು ಆರ್ಎಸ್ಎಸ್ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಖಂಡಿಸಿದ್ದಾರೆ. ಇದು ಶುಭ ದಿನವಾದ್ದರಿಂದ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಏನಿದು ಘಟನೆ
ಪೊಲೀಸ್ ದಾಖಲೆಗಳ ಪ್ರಕಾರ, ಚೆನ್ನೈನ ಪೋರೂರ್ ಬಳಿ ಅಯ್ಯಪ್ಪಂತಂಗಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ವಾನುಮತಿ ಇಲ್ಲದೆ ಗುರು ಪೂಜೆ ಮತ್ತು ವಿಶೇಷ ಶಾಖೆ ತರಬೇತಿ ಅಧಿವೇಶನವನ್ನು ಆಯೋಜಿಸಿದ್ದಕ್ಕಾಗಿ 39 ಆರ್ಎಸ್ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆರ್ಎಸ್ಎಸ್ ಶತಮಾನೋತ್ಸವ ಮತ್ತು ಭಾರತೀಯ ಜನ ಸಂಘದ ಸಂಸ್ಥಾಪಕ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಖಂಡಿಸಿದ ತಮಿಳಿಸೈ ಸೌಂದರರಾಜನ್
ಆರ್ಎಸ್ಎಸ್ನ ಶತಮಾನೋತ್ಸವ ಸಂಸ್ಥಾಪನಾ ದಿನವಾದ ವಿಜಯದಶಮಿಯಂದು ಪೊಲೀಸರು ಆರ್ಎಸ್ಎಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಇದು ಶುಭ ದಿನವಾದ್ದರಿಂದ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆರೆಸ್ಸೆಸ್ ಕುರಿತಾದ ಅಂಚೆಚೀಟಿ-ನಾಣ್ಯವನ್ನು ಟೀಕಿಸಿದ್ದ ಸ್ಟ್ಯಾಲಿನ್
ಅಕ್ಟೋಬರ್ 2 ರಂದು ಆರ್ಎಸ್ಎಸ್ ಸ್ಥಾಪನೆಯ 100 ನೇ ವರ್ಷಾಚರಣೆ ನಡೆಯಿತು. ಇದು ಮಹಾತ್ಮಾ ಗಾಂಧಿಯವರ ಜನ್ಮ ದಿನಾಚರಣೆಯೂ ಆಗಿತ್ತು. ಆರ್ಎಸ್ಎಸ್ನ ಶತಮಾನೋತ್ಸವ ವರ್ಷಕ್ಕಾಗಿ ಕೇಂದ್ರ ಸರ್ಕಾರವು ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಿತು, ಈ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರವಾಗಿ ಟೀಕಿಸಿದ್ದಾರೆ.
ಆರ್ಎಸ್ಎಸ್ ಶತಮಾನೋತ್ಸವ ಮತ್ತು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ನಡುವಿನ ವಿರೋಧಾಭಾಸವನ್ನು ಸ್ಟಾಲಿನ್ ಎತ್ತಿ ತೋರಿಸಿದರು. ನಮ್ಮ ರಾಷ್ಟ್ರಪಿತನನ್ನು ಹತ್ಯೆ ಮಾಡಿದ ಮತಾಂಧನ ಕನಸುಗಳನ್ನು ನನಸಾಗಿಸಿದ ಆರ್ಎಸ್ಎಸ್ ಚಳುವಳಿಯ ಶತಮಾನೋತ್ಸವದಂದು, ದೇಶದ ನಾಯಕತ್ವವು ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡುವ ದಯನೀಯ ಪರಿಸ್ಥಿತಿಯಿಂದ ನಾವು ಭಾರತವನ್ನು ರಕ್ಷಿಸಬೇಕು ಎಂದು ಅವರು ಹೇಳಿದ್ದಾರೆ. ಗಾಂಧಿಯವರ ಜನ್ಮದಿನದಂದು ರಾಷ್ಟ್ರದ ಎಲ್ಲಾ ನಾಗರಿಕರು ತೆಗೆದುಕೊಳ್ಳಬೇಕಾದ ಪ್ರತಿಜ್ಞೆ ಇದು ಎಂದಿದ್ದಾರೆ.
ಎಲ್ಲಾ ಧರ್ಮದ ಜನರಿಗೆ ಜಾತ್ಯತೀತ ರಾಷ್ಟ್ರವಾದ ನಮ್ಮ ಭಾರತವು ಮಹಾನ್ ಗಾಂಧಿಯವರು ಹಾಕಿಕೊಟ್ಟ ಮೂಲಭೂತ ತತ್ವದ ಮೇಲೆ ಸ್ಥಾಪಿತವಾಗಿದೆ ಎಂದು ಹೇಳಿದ್ದಾರೆ. ಜನರಲ್ಲಿ ದ್ವೇಷದ ಬೀಜಗಳನ್ನು ಬಿತ್ತಿದಾಗ ಮತ್ತು ವಿಭಜಕ ಶಕ್ತಿಗಳು ತಲೆ ಎತ್ತಿದಾಗಲೆಲ್ಲಾ, ಅವರ ಶಕ್ತಿಯು ಅವುಗಳನ್ನು ಎದುರಿಸಲು ನಮಗೆ ಅಧಿಕಾರ ನೀಡುತ್ತದೆ. ದೇಶದ ಜಾತ್ಯತೀತ ಮೌಲ್ಯಗಳನ್ನು ಸ್ಟಾಲಿನ್ ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.