M. Ashraf Kammaje..Published : Oct 02 2025, 01:18 PM IST

ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ಗಾಂಧಿ ಜಯಂತಿಯಂದು ಆರ್ಎಸ್ಎಸ್ ಶತಮಾನೋತ್ಸವ ಆಚರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಗಾಂಧೀಜಿಯನ್ನು ಹತ್ಯೆ ಮಾಡಿದ ಸಂಘಟನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿರುವುದು ದೇಶಕ್ಕೆ ಮಾಡಿದ ಅವಮಾನ ಎಂದು ಅವರು ಟೀಕಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಮಹಾತ್ಮ ಗಾಂಧೀಜಿಯವರ 156ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಗಾಂಧೀಜಿಯವರನ್ನು ಹತ್ಯೆ ಮಾಡಿದ ಸಂಘಟನೆಯಾದ ಆರ್ಎಸ್ಎಸ್ (RSS) ಇಂದಿಗೆ 100 ವರ್ಷದ ಶತಮಾನೋತ್ಸವ ಆಚರಣೆ ಮಾಡುತ್ತಿರುವುದು ದೇಶದ ಇತಿಹಾಸಕ್ಕೆ ಕಳಂಕ ತಂದ ಘಟನೆ ಎಂದು ಅವರು ಟೀಕಿಸಿದರು. ಇಡೀ ಪ್ರಪಂಚವೇ ಗಾಂಧೀಜಿಯವರ ಜನ್ಮದಿನವನ್ನು ಆಚರಿಸುತ್ತಿದೆ. ವಿಶ್ವಸಂಸ್ಥೆಯೇ ಅಕ್ಟೋಬರ್ 2 ಅನ್ನು ಸತ್ಯ ಮತ್ತು ಅಹಿಂಸೆಯ ದಿನ ಎಂದು ಘೋಷಿಸಿದೆ. ಗಾಂಧೀಜಿ ಸತ್ಯ, ಶಾಂತಿ ಮತ್ತು ಸದ್ಭಾವನೆಯಿಂದ ಬದುಕಿದ ಮಹಾನ್ ವ್ಯಕ್ತಿ. ಇಂದಿನ ರಾಜಕೀಯದಲ್ಲಿ ನಡೆಯುತ್ತಿರುವ ಸುಳ್ಳು ಪ್ರಚಾರಗಳ ನಡುವೆ ಜನರಿಗೆ ಗಾಂಧೀಜಿಯವರ ಸತ್ಯದ ತತ್ತ್ವ ಇನ್ನಷ್ಟು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಗಾಂಧೀಜಿ ಕೊಂದ ಸಂಘಟನೆ ಶತಮಾನೋತ್ಸವ ಆಚರಣೆ
ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಸಂಘಟನೆ ಇಂದು ತನ್ನ 100 ವರ್ಷದ ಶತಮಾನೋತ್ಸವ ಆಚರಿಸುತ್ತಿದೆ. ಇದು ದೇಶದ ಅತ್ಯಂತ ದೊಡ್ಡ ದುರಂತ. RSS ಕಾರ್ಯಕರ್ತ ನಾಥೂರಾಮ್ ಗೋಡ್ಸೆ ದೇಶದ ಮೊದಲ ಉಗ್ರವಾದಿ. ಸರ್ವೋದಯ, ಶಾಂತಿ ಮತ್ತು ಸದ್ಭಾವನೆಯ ವಿರುದ್ಧ ಪಾಠ ಮಾಡುವ ಸಂಘಟನೆಯು ಇಂತಹ ಕಾರ್ಯಕ್ರಮ ನಡೆಸುವುದು, ಅದಕ್ಕೆ ಪ್ರಧಾನ ಮಂತ್ರಿಯೇ ಹಾಜರಾಗಿರುವುದು ಸ್ವಾತಂತ್ರ ಭಾರತದ ಇತಿಹಾಸದಲ್ಲಿ ಕರಾಳ ದಿನ ಎಂದರು.
ಪಟೇಲ್ ಅವರೇ ನಿಷೇಧಿಸಿದ್ದ ಸಂಘಟನೆ
ಗಾಂಧೀಜಿ ಹತ್ಯೆಯಲ್ಲಿ RSS ನ ಪಾತ್ರದ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ RSS ಅನ್ನು ನಿಷೇಧಿಸಿದ್ದರು. ಇಂತಹ ಸಂಘಟನೆಯ ಶತಮಾನೋತ್ಸವದಲ್ಲಿ ಪ್ರಧಾನ ಮಂತ್ರಿ ಭಾಗವಹಿಸಿರುವುದು ರಾಷ್ಟ್ರದ ಜನತೆಗೆ ಅವಮಾನ. RSS 62 ವರ್ಷಗಳ ಕಾಲ ತನ್ನ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಇಂತಹ ಸಂಘಟನೆಯೊಂದಿಗೆ ನಿಂತಿರುವುದು ಪ್ರಧಾನ ಮಂತ್ರಿಗೆ ಶೋಭೆ ತರುವ ಕೆಲಸವಲ್ಲ ಎಂದು ಹರಿಪ್ರಸಾದ್ ಟೀಕಿಸಿದರು
ಸಾವರ್ಕರ್ ಮತ್ತು ಬ್ರಿಟಿಷರ ಪಾತ್ರದ ಬಗ್ಗೆ ಆರೋಪ
RSS ಹಾಗೂ ಸಾವರ್ಕರ್ ಬಗ್ಗೆ ಹರಿಪ್ರಸಾದ್ ತೀವ್ರ ಕಿಡಿಕಾರಿದರು, “ಸ್ವಾತಂತ್ರ ಹೋರಾಟದ ಸಮಯದಲ್ಲಿ RSS ಬ್ರಿಟಿಷರ ಪರ ನಿಂತು ಬೂಟು ಕಾಲುನೆಕ್ಕುತ್ತಿತ್ತು. ಸಾವರ್ಕರ್ ಅವರು ಬ್ರಿಟಿಷರಿಂದ ಪೆನ್ಷನ್ ಪಡೆದರು. 1942ರ ಕ್ವಿಟ್ ಇಂಡಿಯಾ ಚಳುವಳಿಗೆ ವಿರೋಧ ವ್ಯಕ್ತಪಡಿಸಿದವರು ಇವರೇ. ಇಂತಹ ಸಂಘಟನೆಯ ಪರವಾಗಿ ಸ್ಮಾರಕ ನೋಟು-ಕಾಯಿನ್ ಹೊರಡಿಸುತ್ತಿರುವುದು ಲಕ್ಷಾಂತರ ಸ್ವಾತಂತ್ರ ಹೋರಾಟಗಾರರ ತ್ಯಾಗಕ್ಕೆ ಅವಮಾನ” ಎಂದು ಹೇಳಿದರು.
ಪ್ರಧಾನ ಮಂತ್ರಿ ಕ್ಷಮೆಯಾಚಿಸಬೇಕು
RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನತೆಗೆ ಕ್ಷಮೆಯಾಚಿಸಬೇಕು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ, ದ್ವೇಷ ಮತ್ತು ಭೇದಭಾವ ಸೃಷ್ಟಿಸುವ ಸಂಘಟನೆ ಇದು. ಇಂತಹವರ ಪರವಾಗಿ ನಿಲ್ಲುವುದು ಸಂವಿಧಾನದ ಗೌರವವನ್ನು ಕುಗ್ಗಿಸುವಂತದ್ದು ಎಂದು ತೀವ್ರವಾಗಿ ಹೇಳಿದರು.
RSS ವಿರುದ್ಧ ಹೋರಾಟದ ಕರೆ
“RSS ಸಂಘಟನೆ ಶಸ್ತ್ರಾಸ್ತ್ರಗಳನ್ನು ಹಿಡಿದು ಅನೇಕ ದಂಗೆ, ಕೊಲೆಗಳನ್ನು ಸೃಷ್ಟಿಸಿದೆ. ದೇಶದಲ್ಲಿ ಹಿಂಸೆಯನ್ನು ಬೀಜ ಬಿತ್ತಿದವರ ವಿರುದ್ಧವೇ ಜನರು ಶಸ್ತ್ರಾಸ್ತ್ರ ಹಿಡಿಯಬೇಕಾಗಿದೆ. ಇಂತಹ ಚಟುವಟಿಕೆಗಳ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಕೇಸು ಬುಕ್ ಮಾಡಬೇಕು” ಎಂದು ಹರಿಪ್ರಸಾದ್ ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಸಂದೇಶ
ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಗಾಂಧೀಜಿ ಆದರ್ಶಗಳನ್ನು ಜನರಿಗೆ ತಲುಪಿಸಬೇಕು. ಸರಳ ಜೀವನ – ಉನ್ನತ ಚಿಂತನೆ, ಸರ್ವಧರ್ಮ ಸಮಭಾವ ಹಾಗೂ ಶಾಂತಿ-ಸದ್ಭಾವನೆ ತತ್ವಗಳನ್ನು ಹೆಚ್ಚು ಪ್ರಚಾರ ಮಾಡಬೇಕು” ಎಂದು ಕರೆ ನೀಡಿದರು. ಸಚಿವ ಸಂಪುಟದಲ್ಲಿ ತಮಗೆ ಸ್ಥಾನ ಸಿಗುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, “ಅನಿಸಿಕೆಗಳೇ ಸಾಕಷ್ಟು ಇವೆ. ಬಿರಿಯಾನಿ ತಿನ್ನಬೇಕೆಂದಿದ್ದರೂ ಸದ್ಯಕ್ಕೆ ಚಿತ್ರಾನ್ನ ತಿಂದರೂ ಸಾಕು” ಎಂದು ವ್ಯಂಗ್ಯವಾಡಿದರು.