
ಇಸ್ರೇಲ್ ದಿಗ್ಬಂಧನ ಮುರಿದು ಗಾಝಾದ ಜನತೆಗೆ ಮಾನವೀಯ ನೆರವು ತಲುಪಿಸಲು ಹೊರಟಿರುವ ಸುಮಾರು 50 ಹಡಗುಗಳ ತಂಡ ‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ಗಾಝಾ ತೀರದಿಂದ 150 ನಾಟಿಕಲ್ ಮೈಲುಗಳು (278 ಕಿಮೀ) ದೂರದಲ್ಲಿರುವ ‘ಅತಿ ಅಪಾಯಕಾರಿ ವಲಯ’ಕ್ಕೆ ತಲುಪಿದೆ ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ಬುಧವಾರ (ಅ.1) ವರದಿ ಮಾಡಿದೆ.
ಯಾವುದೇ ಹಾನಿ ಮಾಡದೆ ಫ್ಲೋಟಿಲ್ಲಾ ಗಾಝಾ ತಲುಪಲು ಅನುವು ಮಾಡಿಕೊಡಬೇಕೆಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಫ್ರಾನ್ಸೆಸ್ಕಾ ಅಲ್ಬನೀಸ್ ಮತ್ತು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಇಸ್ರೇಲ್‌ಗೆ ಒತ್ತಾಯಿಸಿದ್ದಾರೆ.
ಅಂತಾರಾಷ್ಟ್ರೀಯ ಜಲಪ್ರದೇಶದ ಮೂಲಕ ಫ್ಲೋಟಿಲ್ಲಾ ಸುರಕ್ಷಿತವಾಗಿ ಸಂಚರಿಸಲು ಸ್ಪೇನ್ ಮತ್ತು ಇಟಲಿಯ ಹಡಗುಗಳು ಕಾವಲು ನಿಂತಿವೆ. ಟರ್ಕಿ ಡ್ರೋನ್‌ಗಳ ಮೂಲಕ ಇಸ್ರೇಲ್‌ನ ಸಂಭಾವ್ಯ ದಾಳಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅಲ್-ಜಝೀರಾ ವರದಿ ಹೇಳಿದೆ.
ಗಾಝಾ ಸಮೀಪಿಸುತ್ತಿದ್ದಂತೆ ಹಡಗುಗಳಲ್ಲಿರುವ ಸುರಕ್ಷತೆಯ ದೃಷ್ಟಿಯಿಂದ ಫ್ಲೋಟಿಲ್ಲಾ ತಂಡ ವಿಡಿಯೋ ನೇರ ಪ್ರಸಾರ ಮಾಡುತ್ತಿದೆ.
ಇಸ್ರೇಲ್ ಫ್ಲೋಟಿಲ್ಲಾ ತಂಡವನ್ನು ತಡೆಯುವುದಾಗಿ ಹೇಳಿದೆ. ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಂಡಿದೆ. ಆದರೆ, ಮಾನವೀಯ ನೆರವು ತಲುಪಿಸುವ ಬಗ್ಗೆ ಏನೂ ಹೇಳಿಲ್ಲ. ಈ ವಿಚಾರದಲ್ಲಿ ಸ್ಥಾಪಿತ ಅಂತಾರಾಷ್ಟ್ರೀಯ ನಿಯಮಗಳು ಇವೆ ಎಂದು ವರದಿಗಳು ಹೇಳಿವೆ.
ನಾಲ್ಕು ಗಂಟೆಗಳ ಮೊದಲು ಇನ್‌ಸ್ಟಾಗ್ರಾಂ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿರುವ ಫ್ಲೋಟಿಲ್ಲಾ ತಂಡ, “ಇಸ್ರೇಲಿ ಮಿಲಿಟರಿ ಹಡಗೊಂದು ನಮ್ಮ ದೋಣಿಗಳನ್ನು ಬೆದರಿಸಲು ಬಂದಿದೆ. ನಮ್ಮ ಸಂವಹನ ವ್ಯವಸ್ಥೆಗಳಿಗೆ ಹಾನಿ ಮಾಡಿದೆ. ನಮ್ಮ ಪ್ರಮುಖ ದೋಣಿಗಳಾದ ಅಲ್ಮಾ ಮತ್ತು ಸಿರಿಯಸ್ ಅನ್ನು ಸುತ್ತುವರೆಯುವ ಪ್ರಯತ್ನ ಮಾಡಿದೆ. ಎಲೆಕ್ಟ್ರಾನಿಕ್ ಸಾಧನಗಳ ನಷ್ಟದ ಹೊರತಾಗಿಯೂ, ನಾವು ಯಾರೂ ಗಾಯಗೊಂಡಿಲ್ಲ. ನಾವು ದಿಗ್ಬಂಧನ ಮುರಿಯುತ್ತೇವೆ. ಮಾನವೀಯ ನೆರವು ತಲುಪಿಸುತ್ತೇವೆ” ಎಂದು ಹೇಳಿದೆ.