
ಪಾಟ್ನಾ: ಬಿಹಾರ (Bihar) ಮತದಾರರ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪ್ರಕ್ರಿಯೆ ಪೂರ್ಣಗೊಂಡಿದೆ. ಮತದಾರರ ಪಟ್ಟಿಯಿಂದ 68 ಲಕ್ಷ ಮತದಾರರನ್ನು ಡಿಲಿಟ್ ಮಾಡಲಾಗಿದೆ. ಅಲ್ಲದೆ, ಹೊಸದಾಗಿ 21 ಲಕ್ಷ ಮತದಾರ ಸೇರ್ಪಡೆಯಾಗಿದೆ.
ಕೇಂದ್ರ ಚುನಾವಣಾ ಆಯೋಗ (Election Commission) ಅಂತಿಮ ಮತದಾರರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಬಿಹಾರದಲ್ಲಿ ಒಟ್ಟು 7.4 ಕೋಟಿ ಮತದಾರರಿದ್ದಾರೆ. ಎಸ್ಐಆರ್ ಪ್ರಕ್ರಿಯೆಯು ಮಾನ್ಯವಾಗಿದೆಯೇ ಎಂಬ ಬಗ್ಗೆ ಅಂತಿಮ ವಿಚಾರಣೆ ಅಕ್ಟೋಬರ್ 7ರಂದು ನಡೆಯಲಿದೆ. ಅಂತಿಮ ಪಟ್ಟಿ ಬಿಡುಗಡೆಯಾದ ನಂತರವೂ, ಯಾವುದೇ ತಪ್ಪು ಕಂಡುಬಂದರೆ ಪ್ರಕ್ರಿಯೆಯನ್ನು ರದ್ದುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಹಿಂದಿನ ವಿಚಾರಣೆಯಲ್ಲಿ ಸ್ಪಷ್ಟಪಡಿಸಿತ್ತು.
ಬಿಹಾರ ಸಿಇಒ ಕಚೇರಿಯ ಪ್ರಕಾರ, ಮತದಾರರ ಪಟ್ಟಿಯ (Voter List) ಭೌತಿಕ ಪ್ರತಿಗಳನ್ನು ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿ-ಕಮ್-ಜಿಲ್ಲಾ ಮ್ಯಾಜಿಸ್ಟ್ರೇಟ್ಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಅಂತಿಮ ಪಟ್ಟಿಯನ್ನು ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಪಕ್ಷಗಳಿಗೂ ಒದಗಿಸಲಾಗುವುದು ಎಂದು ತಿಳಿಸಿದೆ
ಅಕ್ಟೋಬರ್ 6 ಮತ್ತು 7 ರ ನಡುವೆ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆಯಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅಕ್ಟೋಬರ್ 4-5ರಂದು ಬಿಹಾರಕ್ಕೆ ಭೇಟಿ ನೀಡಿ ಚುನಾವಣಾ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ.